ಗಂಗಾವತಿ(ಕೊಪ್ಪಳ): ಬಾಕಿ ಹಣ ಪಾವತಿಸಿದ್ರೂ ಋಣಮುಕ್ತ ಪತ್ರ ನೀಡಲು ವಿನಾಕಾರಣ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೊಪ್ಪಳ ರಸ್ತೆಯಲ್ಲಿರುವ ಫುಲ್ಟರ್ನ್ ಎಂಬ ಖಾಸಗಿ ಹಣಕಾಸು ಸಂಸ್ಥೆಗೆ ಮುತ್ತಿಗೆ ಹಾಕಿದ ನಗರದ ಗುಂಡಮ್ಮ ಕ್ಯಾಂಪಿನ ಗ್ರಾಮಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಹಣಕಾಸು ಸಂಸ್ಥೆ ಹಾಗೂ ಅದರ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲು ಈ ಹಣಕಾಸು ಸಂಸ್ಥೆಯಲ್ಲಿ ಋಣಮುಕ್ತ ಪ್ರಮಾಣಪತ್ರ ನೀಡಬೇಕು. ಆದರೆ, ಸಂಸ್ಥೆಯ ಸಿಬ್ಬಂದಿ ಕಳೆದ ಎಂಟು ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.