ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಧಾರಕಾರ ಮಳೆಯಿಂದಾಗಿ ಮಲ್ಲಾಪುರ ಭಾಗದ ಮಂಡಕ್ಕಿ ತಯಾರಿಸುವ ವಿಶೇಷ ಭತ್ತ ಹಾನಿಗೀಡಾಗಿದ್ದು, ಸ್ಥಳಕ್ಕೆ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಕಂದಾಯ ಇಲಾಖೆಯ ನಿರೀಕ್ಷಕ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಬೆಳೆ ಹಾನಿಯಾದ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳು ಗದ್ದೆಯ ಮಾಲೀಕರಿಂದ ಬೆಳೆ ನಾಶಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಎಂಟಿಯು 1010 ವಿಶೇಷ ಭತ್ತ ಹಾನಿ:
ಮಲ್ಲಾಪುರ ಗ್ರಾಮ ಒಂದರಲ್ಲಿಯೇ ಒಟ್ಟು 40 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಎಂಟಿಯು 1010 ವಿಶೇಷ ಭತ್ತ ಹಾನಿಯಾಗಿದೆ. ಈ ಭತ್ತದಿಂದ ಮಂಡಕ್ಕಿ ತಯಾರಿಸಲಾಗುತ್ತದೆ. ಎಕರೆಗೆ ತಲಾ 5 ರಿಂದ 6 ಸಾವಿರ ರೂಪಾಯಿ ಮೊತ್ತದ ಅಂದಾಜು ಹಾನಿಯಾಗಿದ್ದು, ಹಾನಿಯ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಹೇಳಿದರು.