ಗಂಗಾವತಿ: ನಗರದ ಹಿರೇಜಂತಕಲ್ ಪ್ರದೇಶದ 55 ವರ್ಷದ ಮಹಿಳೆಯೊಬ್ಬರಲ್ಲಿ ಸೋಮವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಮಹಿಳೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮೂಲಕ ನಗರದಲ್ಲಿ ಕೊರೊನಾಕ್ಕೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ. ಈ ಮಹಿಳೆ ಜೂ.19ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಪಟ್ಟಣದಿಂದ ಬಂದಿದ್ದರು ಎನ್ನಲಾಗಿದೆ. ಆದರೆ ಮಹಿಳೆಯಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಗೋಚರಿಸಿಲ್ಲ.
ಸೋಂಕಿತ ಮಹಿಳೆ ವಾಸಿಸುತ್ತಿದ್ದ ಪ್ರದೇಶದಲ್ಲಿ ಇದೀಗ ಸೀಲ್ಡೌನ್ ಮಾಡಲಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಒಂದೇ ಕುಟುಂಬದ ಮೂವರಿಗೆ ಸೋಂಕು:
ತಾಲೂಕಿನ ಶ್ರೀರಾಮನಗರದಲ್ಲಿ ಒಂದೇ ಮನೆಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಗಂಟಲು ದ್ರವ ಪರೀಕ್ಷೆಯ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು ನೆಗೆಟಿವ್ ಫಲಿತಾಂಶ ಬಂದಿದೆ.
ವಿಜಯವಾಡ ಪ್ರವಾಸ ಕೈಗೊಂಡು ಆಗಮಿಸಿದ್ದ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳಿಗೆ ಜೂ.18ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.