ಗಂಗಾವತಿ: ಗುಣಮಟ್ಟದ ಚಿಕಿತ್ಸೆ, ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಸೌಲಭ್ಯ, ಕಾರ್ಪೋರೆಟ್ ಆಸ್ಪತ್ರೆಗಳ ಮಾದರಿಯ ವ್ಯವಸ್ಥೆ, ಅಚ್ಚುಕಟ್ಟಾದ ಆಡಳಿತ, ಸ್ವಚ್ಛತೆ ಮೊದಲಾದ ಅಂಶಗಳಿಂದ ರಾಜ್ಯದ ಗಮನ ಸೆಳೆದಿದ್ದ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಇದೀಗ ರಾಷ್ಟ್ರೀಯಮಟ್ಟದ ಪ್ರಶಸ್ತಿ ಸಿಕ್ಕಿದೆ. ಇದುವರೆಗೂ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಮದರಿಯಾಗಿದ್ದ ಈ ಆಸ್ಪತ್ರೆ ಇದೀಗ ಕೇಂದ್ರದ ಆರೋಗ್ಯ ಇಲಾಖೆ ನಿಗದಿ ಮಾಡಿದ್ದ ಮಾನದಂಡಗಳಲ್ಲಿ 15 ವಿಭಾಗದಲ್ಲಿ ಶೇ.95ರಷ್ಟು ಅಂಕಪಡೆದು ಪ್ರಮಾಣಿಕೃತ ಸೇವೆ ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ.
ಈಗಾಗಲೇ ನಾಲ್ಕೈದು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆಗೆ ಎಂದು ಹೆಸರು ಮಾಡಿರುವ ಮತ್ತು ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿರುವ ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಇದೀಗ ಕೇಂದ್ರ ಸರ್ಕಾರದ ಎನ್ಕ್ಯೂಎಎಸ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ಕೇಂದ್ರದ ಈ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಆಸ್ಪತ್ರೆಯಾಗಿ ಗಂಗಾವತಿ ಉಪ ವಿಭಾಗ ಆಸ್ಪತ್ರೆ ದಾಖಲೆ ಸೃಷಿಸಿದೆ. ಈ ಉಪ ವಿಭಾಗ ಆಸ್ಪತ್ರೆಯೊಂದಿಗೆ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ಮತ್ತು ಕೊಲಾರ ಜಿಲ್ಲೆಯ ಅಡ್ಡಗಾಲ್ ತಾಲೂಕು ಆಸ್ಪತ್ರೆಗಳು ಸ್ಪರ್ಧೆಯೊಡ್ಡಿದ್ದವು. ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿರುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಮಿಷನ್ನ ಹೆಚ್ಚುವರಿ ನಿರ್ದೇಶಕ ರೋಲಿಸಿಂಗ್, ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್ ಕುಮಾರ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದಿಂದ ಆಗಮಿಸಿದ್ದ ನುರಿತ ಗುಣಮಟ್ಟ ಪರಿಶೀಲನಾ ತಜ್ಞರ ತಂಡ 2022ರ ಅಕ್ಟೋಬರ್ 10ರಂದು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಬೀಡುಬಿಟ್ಟು, 15ಕ್ಕೂ ಹೆಚ್ಚು ನಾನಾ ವಿಭಾಗದಲ್ಲಿ ತಪಾಸಣೆ ನಡೆಸಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಹೆಸರು: ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಮಾನದಂಡದ ಆಧಾರದಲ್ಲಿ ಗಂಗಾವತಿ ಆಸ್ಪತ್ರೆಯಲ್ಲಿ ಯೋಜನೆಗಳ ಅನುಷ್ಠಾನ ಬಳಕೆ, ದಾಖಲೆಗಳ ನಿರ್ವಹಣೆ, ಆಡಳಿತ, ರೋಗಿಗಳಿಗೆ ಚಿಕಿತ್ಸೆ, ಸೇವೆ ಸೇರಿದಂತೆ ಆಡಳಿತಾತ್ಮಕ ಉತ್ತಮ ನಿರ್ವಹಣೆ ತೋರುವ ಮೂಲಕ ರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಆಸ್ಪತ್ರೆಯ ಒಳರೋಗಿ, ಹೊರರೋಗಿ, ಐಸಿಯು, ನವಜಾತಶಿಶುಗಳ ಆರೈಕೆ, ಆಪರೇಶನ್ ಥಿಯೇಟರ್, ಎಮರ್ಜನ್ಸಿ ವಾರ್ಡ್, ಹೆರಿಗೆ, ನವಜಾತ ಶಿಶುಗಳ ಆರೈಕೆ ವಿಭಾಗ, ಪ್ರಯೋಗಾಲಯ, ಬೈಯೋ ವೇಸ್ಟೇಜ್, ಔಷಧಾಲಯ ಸೇರಿದಂತೆ ಒಟ್ಟು ಹದಿನೈದು ವಿಭಾಗದಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿತ್ತು.
ಈ ಪೈಕಿ ಕೇಂದ್ರದ ರಾಷ್ಟ್ರೀಯ ಗುಣಮಟ್ಟ ಭರವಸೆಯ ಮಾನ್ಯಕ (ಎನ್ಕ್ಯೂಎಎಸ್)ದ ಪ್ರಕಾರ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಗೆ 15 ವಿಭಾಗದಲ್ಲಿ ಶೇ.95ರಷ್ಟು ಅಂಕ ಲಭಿಸಿದೆ. ಸಿರಾದ ತಾಲೂಕು ಆಸ್ಪತ್ರೆಗೆ ಹತ್ತು ವಿಭಾಗದಲ್ಲಿ ಶೇ.85ರಷ್ಟು ಅಂಕ ಲಭಿಸಿವೆ. ಕೋಲಾರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರು ವಿಭಾಗದಲ್ಲಿ ಶೇ81ರಷ್ಟು ಅಂಕ ಲಭಿಸಿವೆ.
ಮೂರು ಬಾರಿ ಪ್ರಶಸ್ತಿಗೆ ಆಯ್ಕೆ ಆಗಿ ಹೆಮ್ಮೆಯ ಸಾಧನೆ: ಈಗಾಗಲೇ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿಗೆ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ರಾಜ್ಯದ ಏಕೈಕ ಆಸ್ಪತ್ರೆ ಎಂದು ಗುರುತಿಸಿಕೊಂಡಿದ್ದ ಗಂಗಾವತಿಗೆ ಇದೀಗ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಅತಿಹೆಚ್ಚು ಹೆರಿಗೆಯಾಗುವ, ಅತಿಹೆಚ್ಚು ಸಹಜ ಹೆರಿಗೆಯಾಗುವ, ಅತಿಹೆಚ್ಚು ಹೊರರೋಗಿಗಳಿಗೆ ಚಿಕಿತ್ಸೆ ನೀಡುವ, ಅತಿಹೆಚ್ಚು ಒಳರೋಗಿಗಳು ದಾಖಲಾಗುವ ಆಸ್ಪತ್ರೆ ಎಂದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಇಲ್ಲಿನ ಆಸ್ಪತ್ರೆಗೆ ಇದೀಗ ಮತ್ತೊಂದು ಗರಿ ಮೂಡಿದೆ.
ಆಸ್ಪತ್ರೆ ಸಾಧನೆ ಬಗ್ಗೆ ವೈದ್ಯರು, ಸಾರ್ವಜನಿಕರು, ಸಿಬ್ಬಂದಿ ಹೇಳುವುದೇನು?: ’’ನಾವೂ ಕೂಡ ಇದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡವರು. ಜೊತೆಗೆ ಮಕ್ಕಳ ಆಪರೇಶನ್ ಕೂಡ ಇಲ್ಲಿಯೇ ಆಗಿದೆ. ಅನಾರೋಗ್ಯ ಕಂಡುಬಂದಲ್ಲಿ ನಾನಷ್ಟೇ ಅಲ್ಲ, ನಮ್ಮ ಮನೆಯಲ್ಲಿರುವ ಎಲ್ಲರೂ ಇದೇ ಆಸ್ಪತ್ರೆಗೆ ಬರುತ್ತೇವೆ. ಯಾರೂ ಸಹ ಖಾಸಗಿ ಆಸ್ಪತ್ರೆಗೆ ತೆರಳುವುದಿಲ್ಲ. ಬಹಳ ಸ್ವಚ್ಛತೆ ಇದೆ. ಬೇರೆ ಆಸ್ಪತ್ರೆಗಳನ್ನು ಸಹ ನಾನು ನೋಡಿದ್ದೇನೆ. ಆದರೆ, ನಮ್ಮ ಗಂಗಾವತಿ ಆಸ್ಪತ್ರೆಯ ರೀತಿ ಎಲ್ಲಿಯೂ ಇಲ್ಲ’’. - ಗಿರಿಜಾ ಉಮಾಕಾಂತ್, ಸ್ಥಳೀಯರು
ಎಲ್ಲರೂ ಇಲ್ಲೇ ಬರ್ತಾರೆ: ’’ನಾನು ಸುಮಾರು ವರ್ಷಗಳಿಂದ ಇದೇ ಆಸ್ಪತ್ರೆಗೆ ಬರುತ್ತಿದ್ದೇನೆ. ಉತ್ತಮ ಸೇವೆ ನೀಡುತ್ತಿದ್ದೆ. ಆಸ್ಪತ್ರೆಯನ್ನು ನವೀಕರಣಗೊಳಿಸಿದ್ದಾರೆ. ಎಲ್ಲ ವಿಭಾಗದ ತಜ್ಞ ವೈದ್ಯರಿದ್ದಾರೆ. ಕಲಿತವರು ಮತ್ತು ನಮ್ಮಂತಹ ತಿಳಿವಳಿಕೆ ಇದ್ದವರೂ ಸಹ ಈ ಸರ್ಕಾರಿ ಆಸ್ಪತ್ರೆಗೆ ಬಂದು ಸೇವೆಯನ್ನು ಪಡೆದುಕೊಳ್ಳುತ್ತಿದ್ದೇವೆ. ನಾವಷ್ಟೇ ಅಲ್ಲ, ಸುಮಾರು ನಾಲ್ಕಾರು ತಾಲೂಕುಗಳ ರೋಗಿಗಳು ಸಹ ಇದೇ ಆಸ್ಪತ್ರೆಗೆ ಬರುತ್ತಿದ್ದಾರೆ. ಪ್ರತಿಯೊಂದು ಸೌಲಭ್ಯ ಇದೆ. ಆಸ್ಪತ್ರೆಯ ಎಲ್ಲ ವೈದ್ಯರು ವಿಶೇಷವಾಗಿ ಕಾಳಜಿವಹಿಸಿ ನೋಡಿಕೊಳ್ಳುತ್ತಾರೆ. ಈ ಆಸ್ಪತ್ರೆಯ ಗಣನೀಯ ಮತ್ತು ಗುಣಮಟ್ಟ ಸೇವೆಗೆ ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಇದು ಸಂತೋಷ ವಿಶಯ. ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳಬೇಕು’’. - ಆರ್ ಪಿ ರೆಡ್ಡಿ - ನಿವೃತ್ತ ವಕೀಲ
ಖಾಸಗಿ ಆಸ್ಪತ್ರೆಗೆ ನಾನೂ ಹೋಗಲೇ ಇಲ್ಲ: ’’ನಾನು 1997ರಿಂದ ಈ ಆಸ್ಪತ್ರೆಗೆ ಬರುತ್ತಿದ್ದೇನೆ. ನನ್ನ ಮೊದಲ ಹೆರಿಗೆ ಆಗಿದ್ದೂ ಇದೆ ಆಸ್ಪತ್ರೆಯಲ್ಲಿ. ಇಲ್ಲಿ ಹೆರಿಗೆ ಬಗ್ಗೆ ಒತ್ತು ನೀಡುತ್ತಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೂಡ ಎದ್ದು ಕಾಣುತ್ತದೆ. ಹಾಗಾಗಿ ನಾನು ಖಾಸಗಿ ಆಸ್ಪತ್ರೆಗೆ ಯಾವತ್ತೂ ಹೋದವರಲ್ಲ. ಇತ್ತೀಚೆಗೆ ನನ್ನ ಮಗಳನ್ನು ಸಹ ಇದೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ವೈದ್ಯರೂ ಸೇರಿದಂತೆ ಇಲ್ಲಿನ ಸಿಬ್ಬಂದಿಗಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಿದೆ’’. - ಶರಣಮ್ಮ ಗಂಗಾವತಿ, ಸ್ಥಳೀಯರು
ಗುಣಮಟ್ಟದ ಪರೀಕ್ಷೆ ನಮ್ಮಲ್ಲಿದೆ: ’’ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟಗಳ ಪರೀಕ್ಷೆಗಾಗಿ ರಾಷ್ಟ್ರಮಟ್ಟದದಿಂದ ನ್ಯಾಷನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ (ಎನ್ಕ್ಯೂಎಎಸ್) ಅಂತ ಒಂದು ಸರ್ಟಿಫಿಕೇಶನ್ ಇದೆ. ನಮ್ಮ ಕೊಪ್ಪಳ ಜಿಲ್ಲೆಯ ಜಿಲ್ಲೆಯ ಗಂಗಾವತಿ ತಾಲೂಕು ಆಸ್ಪತ್ರೆ ಈ ಎನ್ಕ್ಯೂಎಎಸ್ ಸರ್ಟಿಫಿಕೇಶನ್ನಲ್ಲಿ 15 ವಿಭಾಗದಲ್ಲಿ ಶೇ.95ರಷ್ಟು ಅಂಕಪಡೆದು ಅತ್ಯುನ್ನತ ಗುಣಮಟ್ಟದ ರಾಷ್ಟ್ರೀಯ ಆಸ್ಪತ್ರೆ ಎನ್ನುವಂತಹ ಕೀರ್ತಿಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 15 ವಿಭಾಗದಲ್ಲಿ ಶೇ.95ರಷ್ಟು ಅಂಕಪಡೆದ ಮೊದಲ ಆಸ್ಪತ್ರೆ ಇದು. ಕರ್ನಾಟಕದಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲೇ ಇಷ್ಟು ವಿಭಾಗಗಳಲ್ಲಿ ಶೇ.95ರಷ್ಟು ಅಂಕಪಡೆದ ಯಾವುದಾದರೂ ಆಸ್ಪತ್ರೆ ಇದ್ರೆ ಅದು ಗಂಗಾವತಿ ತಾಲೂಕು ಆಸ್ಪತ್ರೆ ಮಾತ್ರ’’. - ಡಾ. ಈಶ್ವರ ಸವುಡಿ, ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
ಇದನ್ನೂ ಓದಿ: ಮೋದಿ ಅವರನ್ನು ಮನೆಗೆ ಕರೆಯುವ ಆಸೆ ಇದೆ: ಪ್ರಧಾನಿಗೆ ಹಾರ ಹಾಕಲು ಯತ್ನಿಸಿದ ಬಾಲಕನ ಹೇಳಿಕೆ