ಗಂಗಾವತಿ: ಇಲ್ಲಿನ ರಾಮಮಂದಿರದಲ್ಲಿ ಸ್ಥಳೀಯ ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಅವರು ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ಹೆಲ್ಮೆಟ್ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.
ಹೌದು, ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ತೆರಳಲು ಮೂಗು ಮುರಿಯುವ ಜನಸಮೂಹ ಒಂದೆಡೆಯಾದರೆ ಗಂಗಾವತಿಯ ಈ ಕುಟುಂಬ ತಮ್ಮ ಖಾಸಗಿ ಸಮಾರಂಭದಲ್ಲೇ ಸಾಮಾಜಿಕ ಕಳಕಳಿ ಮೂಡಿಸುವ ಕೆಲಸ ಮಾಡಿದ್ದು, ನಿಜಕ್ಕೂ ಶ್ಲಾಘನೀಯ.
ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿಯ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿಗಳನ್ನು ನೀಡಿ ಪರಿಸರ ಜಾಗೃತಿಯನ್ನೂ ಮೂಡಿಸಿದರು. ಈ ಮೂಲಕ ವಿಭಿನ್ನವಾಗಿ ಮಗನ ನಾಮಕರಣ ಮಾಡಿದ್ದು, ಹಲವರ ಪ್ರಶಂಸೆಗೆ ಪಾತ್ರವಾಯಿತು.