ಗಂಗಾವತಿ: ತಾಲೂಕಿನ ಚಿಕ್ಕರಾಂಪುರ ಬಳಿ ಇರುವ ಅಂಜನಾದ್ರಿ ಹನುಮನ ದೇಗುಲಕ್ಕೆ ಹರಕೆ ಹೊತ್ತು ನೂರಾರು ಭಕ್ತರು ಕನಕಗಿರಿ ತಾಲೂಕಿನಲ್ಲಿ ಹನುಮ ಮಾಲೆ ಧರಿಸಿದ್ದಾರೆ. ಇದೇ ತಿಂಗಳು ನಡೆಯಲಿರುವ ಶ್ರೀರಾಮ ನವಮಿ ಹಾಗೂ ಅಮೃತ ಸಿದ್ಧಿ ಯೋಗ ವಿಶಿಷ್ಟವಾಗಿ ಆಚರಿಸುವ ಉದ್ದೇಶಕ್ಕೆ ಈ ವ್ರತಾಚರಣೆ ಕೈಗೊಂಡರು.
ಕನಕಗಿರಿಯ ತೊಂಡಿತೇರಪ್ಪ ದೇಗುಲದಲ್ಲಿ ಸುಮಾರು 95ಕ್ಕೂ ಹೆಚ್ಚು ಜನ ಧಾರ್ಮಿಕ ಕಾರ್ಯಕ್ರಮ ಅನುಷ್ಠಾನದ ಮೂಲಕ ಹನುಮ ಮಾಲಾಧಾರಣೆ ಮಾಡಿದರು. ಈ ಸಂದರ್ಭ ಮುಸಲಾಪುರ, ತಿಪ್ಪನಾಳ, ನವಲಿ, ನವಲಿ, ಬೆನಕನಾಳ ಸೇರಿದಂತೆ ನಾನಾ ಗ್ರಾಮಗಳಿಂದ ಬಂದ ಭಕ್ತರು ಹನುಮ ಮಾಲೆ ಧರಿಸಿದರು.
ಕೆಲವರು ದ್ವಿಚಕ್ರ ವಾಹಗಳ ಮೂಲಕ ಇನ್ನೂ ಕೆಲವರು ಕನಕಗಿರಿಯಿಂದ ಕಾಲ್ನಡಿಗೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಬರುವ ವಾಡಿಕೆ ಇದೆ. ಒಟ್ಟು 37 ಕಿ.ಮೀ ದೂರದ ಅಂಜನಾದ್ರಿಗೆ ಕೆಲ ಭಕ್ತರು ಎರಡು ದಿನದ ಕಾಲ್ನಡಿಗೆ ಮೂಲಕ ತಲುಪಿ ಬಳಿಕ ಮಾಲಾ ವಿರಮಣ ಮಾಡುತ್ತಾರೆ.