ಗಂಗಾವತಿ(ಕೊಪ್ಪಳ): ಒಂದು ದಶಕದಿಂದ ಗಂಗಾವತಿಯ ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೃಷಿ ಕಾಲೇಜು ಆರಂಭಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಕಾಲೇಜು ಹಾಗೂ ತರಗತಿ ಆರಂಭಕ್ಕೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ಇದೇ ಸಾಲಿನಲ್ಲಿ ಸಿಇಟಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಿಎಸ್ಸಿ ಅಗ್ರಿಕಲ್ಚರ್ಗೆ ಸೀಟುಗಳನ್ನು ಅಲಾಟ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಕಲ್ಯಾಣ ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಸಾಮಾನ್ಯ ಕೋಟಾದಡಿ 5, ಕೃಷಿ ವಲಯದಡಿ (ರೈತರ ಮಕ್ಕಳು) 3, ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಸಾಮಾನ್ಯ ವರ್ಗಕ್ಕೆ 11, ಕೃಷಿ ವಲಯಕ್ಕೆ 7, ವಿಶೇಷ ಕೋಟಾದಡಿ 4 ಸೇರಿದಂತೆ ಒಟ್ಟು ಬಿಎಸ್ಸಿ ಅಗ್ರಿಕಲ್ಚರ್ಗೆ 30 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಅನುಮತಿ ನವೀಕರಣ ನಿಬಂಧನೆ ಸಡಿಲಗೊಳಿಸುವಂತೆ ಮನವಿ
ಈ ಶೈಕ್ಷಣಿಕ ವರ್ಷದಲ್ಲಿ ಕೃಷಿ ಕಾಲೇಜು ಆರಂಭವಾಗುವುದು ಅನುಮಾನವಿತ್ತು. ಆದರೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪಟ್ಟು ಹಿಡಿದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೇಲೆ ಒತ್ತಡ ಹೇರಿ ಕಾಲೇಜು ಆರಂಭಿಸುವಲ್ಲಿ ಯಶ ಕಂಡಿದ್ದಾರೆ.