ಗಂಗಾವತಿ (ಕೊಪ್ಪಳ): ಮಂಗಳವಾರ ನಿಧನರಾಗಿದ್ದ ರಾಜಕೀಯ ರಂಗದ ಅಜಾತಶತ್ರು, ಆನೆಗುಂದಿ ರಾಜವಂಶಸ್ಥರು ಹಾಗೂ ಮಾಜಿ ಸಚಿವ ಶ್ರೀರಂಗದೇವರಾಯಲು ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ ಆನೆಗೊಂದಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಗಂಗಾವತಿ ತಹಶೀಲ್ದಾರ್ ಮಂಜುನಾಥ್ ಭೋಗಾವತಿ ನೇತೃತ್ವದಲ್ಲಿ, ರಾಯಲು ಅವರ ಹಿರಿಯ ಪುತ್ರ ಕೃಷ್ಣದೇವರಾಯರು ತಾಲೂಕು ಆಡಳಿತ ನೀಡಿದ್ದ ರಾಷ್ಟ್ರಧ್ವಜವನ್ನು ಶ್ರೀರಂಗದೇವರಾಯಲು ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿ ಗೌರವ ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಮರ್ಪಿಸಲಾಯಿತು. ಬಳಿಕ ರಾಯಲು ಅವರ ಹಿರಿಯ ಪುತ್ರ ತಮ್ಮ ತಂದೆಯ ಚಿತೆಗೆ ಕ್ಷತ್ರೀಯ ವಿಧಿ-ವಿಧಾನಗಳಂತೆ ಅಗ್ನಿಸ್ಪರ್ಶ ಮಾಡಿದರು.

ಇದಕ್ಕೂ ಮೊದಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ವಿವಿಧ ಕ್ಷೇತ್ರದ ಗಣ್ಯರು ರಾಯಲು ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಜಿಲ್ಲಾಧಿಕಾರಿ ನಲೀನ್ ಅತುಲ್, ಎಸ್ಪಿ ಯಶೋಧಾ ವೆಂಟಿಗೋಡೆ, ಸಹಾಯಕ ಆಯುಕ್ತ ಮಹೇಶ ಕ್ಯಾಪ್ಟನ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಇಂದು (ಬುಧವಾರ) ಗಂಗಾವತಿಯ ನಿವಾಸದಿಂದ ರಾಯಲು ಅವರ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಗ್ರಾಮ ಆನೆಗುಂದಿಗೆ ತರಲಾಯಿತು. ಸಂಜೆ 4 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಇಲ್ಲಿಯ ನಿವಾಸದಿಂದ ಮೆರವಣಿಗೆ ಮೂಲಕ ಅವರ ತೋಟಕ್ಕೆ ತರಲಾಯಿತು. ಬಳಿಕ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.
ಇದನ್ನೂ ಓದಿ: ಕಳಚಿದ ಆನೆಗೊಂದಿ ರಾಜವಂಶಿಕರ ಮತ್ತೊಂದು ಕೊಂಡಿ.. ಕಾಂಗ್ರೆಸ್ ಮಾಜಿ ಸಚಿವ ರಾಯಲು ಇನ್ನಿಲ್ಲ