ಗಂಗಾವತಿ : ಒಬ್ಬೊಬ್ಬರ ಹವ್ಯಾಸ ಒಂದೊಂದು ರೀತಿಯಾಗಿರುತ್ತದೆ. ವೃತ್ತಿಯ ಜೊತೆಗೆ ಪ್ರವೃತ್ತಿಯಲ್ಲಿ ಸಿಗುವ ಖುಷಿ ಅನುಭವಿಸಲು ಸಾಕಷ್ಟು ಜನ ನಾನಾ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ವಿಭಿನ್ನ ವ್ಯಕ್ತಿತ್ವ ಹೊಂದಿರುವವರೇ ತಾಲೂಕಿನ ಹೆಬ್ಬಾಳ ಗ್ರಾಮದ ಬಿ.ಉಮೇಶ.
ಉಮೇಶ ಜೀವನ ನಡೆಸಲು ಗ್ರಾಮದಲ್ಲಿ ಸಣ್ಣದೊಂದು ಪಾನ್ ಬೀಡ ಅಂಗಡಿ ಮತ್ತು ಪಂಚರ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಪ್ರವೃತ್ತಿಯಲ್ಲಿ ಗ್ರಾಮದ ಮಕ್ಕಳು, ಯುವಕರಿಗೆ ಆಪತ್ಬಾಂಧವ. ಯಾಕೆಂದರೆ ಊರಿನಲ್ಲಿ ಯಾರಿಗೆ ಏನೇ ಆಕಸ್ಮಿಕ ಗಾಯಗಳಾದರೂ ಉಮೇಶ ತಕ್ಷಣ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅದರಲ್ಲೂ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಉಮೇಶ ಅತೀ ವಿರಳವಾಗಿರುವ ಒ ಪಾಸಿಟಿವ್ ಬಾಂಬೆ ಗ್ರೂಪ್ನ ರಕ್ತ ಹೊಂದಿದ್ದು, ಪ್ರಥಮ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ರಕ್ತದಾನ ಮಾಡುವ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.