ಗಂಗಾವತಿ: ಅಕ್ಕಿ ಮತ್ತು ಅಕ್ಕಿ ನುಚ್ಚು ಖರೀದಿಸಿದ್ದ ಮಹಾರಾಷ್ಟ್ರ ಮೂಲದ ಐವರು ಬ್ರೋಕರ್ಗಳು ನಗರದ ಉದ್ಯಮಿಗೆ 1.43 ಕೋಟಿ ರೂ.ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಉದ್ಯಮಿ ಪ್ರಕಾಶ್ ಚಂದ ಛೋಪ್ರಾ ವಂಚನೆಗೊಳಗಾಗಿದ್ದು, ಮಹಾರಾಷ್ಟ್ರದ ಮುಖೇಶ ಅಗರ್ವಾಲ್, ಲಲಿತ್ ರಾಜಪೂತ್, ಇಸ್ಮಾಯಿಲ್ ಅಬ್ದುಲ್ ಮಜೀದ್ ಅನ್ಸಾರಿ, ಶರೀಫ್ ನಜೀರುದ್ದೀನ್ ಸೈಯ್ಯದ್, ಇಸ್ಮಾಯಿಲ್ ಭಾಯಿ ಎಂಬುವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ದಲ್ಲಾಳಿ ಮುಖೇಶ ಅಗರ್ ವಾಲ್ ಮೂಲಕ ಜು.6 ರಿಂದ ನ.19ರವರೆಗೆ ಆರೋಪಿಗಳು ಅಕ್ಕಿ ಮತ್ತು ಅಕ್ಕಿ ನುಚ್ಚು ಖರೀದಿಯ ಬೇಡಿಕೆ ಸಲ್ಲಿಸಿದ್ದಾರೆ. ಖರೀದಿಯ ಬೇಡಿಕೆಗೆ ಅನುಗುಣವಾಗಿ ಉದ್ಯಮಿಯಿಂದ ಅಕ್ಕಿ ಮತ್ತು ನುಚ್ಚನ್ನು ರವಾನಿಸಿದ್ದರಂತೆ.
ಓದಿ: 1985 ರಿಂದ 2020ರವರೆಗಿನ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಬಿಡಿಎ ಮನವಿ
ಮುಖೇಶ ಅಗರ್ವಾಲ್ 32.29 ಲಕ್ಷ ರೂ., ಲಲಿತ್ ರಜಪೂತ್ 49.95 ಲಕ್ಷ ರೂ., ಇಸ್ಮಾಯಿಲ್ ಅಬ್ದುಲ್ ಮಜೀದ್ ಅನ್ಸಾರಿ 18.26 ಲಕ್ಷ ರೂ., ಶರೀಫ್ ನಜೀರುದ್ದೀನ್ 36.38 ಲಕ್ಷ ರೂ ಮತ್ತು ಇಸ್ಮಾಯಿಲ್ ಭಾಯಿಗೆ 6.12 ಲಕ್ಷ ರೂ. ಮೌಲ್ಯದ ಅಕ್ಕಿ ಮತ್ತು ಅಕ್ಕಿ ನುಚ್ಚು ಕಳುಹಿಸಲಾಗಿತ್ತು. ಆದರೆ ಮಧ್ಯವರ್ತಿಗಳು ಹಣ ನೀಡದೆ ಉದ್ಯಮಿಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಮಧ್ಯವರ್ತಿಗಳು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಎಲ್ಲಾ ಆರೋಪಿಗಳು ನಾಗಪುರ ನಿವಾಸಿಗಳಿದ್ದು, ಆರಂಭದಲ್ಲಿ ನಂಬಿಕಸ್ಥರಂತೆ ವರ್ತಿಸಿ ನಂತರ ಭಾರಿ ಪ್ರಮಾಣದ ದಾಸ್ತಾನು ಖರೀದಿಸಿ ನಾಪತ್ತೆಯಾಗಿದ್ದಾರೆ ಉದ್ಯಮಿ ದೂರಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.