ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ನಾಲ್ವರು ಮಹಿಳೆಯರು ನಿನ್ನೆ ರಾತ್ರಿ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಇಂದು ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಗಿರಿಜಮ್ಮ( 32), ಭುವನೇಶ್ವರಿ (40), ವೀಣಾ ಮಾಲಿಪಾಟೀಲ್ (19), ಪವಿತ್ರಾ (35) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ : ಪ್ರತಿ ದಿನದಂತೆ ಇವರೆಲ್ಲ ಹತ್ತಿ ಬೀಜ ಸಂಸ್ಕರಣೆ ಮಾಡುವ ಕೆಲಸಕ್ಕೆ ತೆರಳಿದ್ದರು. ಶನಿವಾರ ಕೆಲಸ ಮುಗಿಸಿ ಮನೆಗೆ ಬರುವಾಗ ಭಾರಿ ಮಳೆಯಾಗಿದೆ. ಇದರಿಂದಾಗಿ ಸಂಕನೂರು ಗ್ರಾಮದ ಪಕ್ಕದಲ್ಲೇ ಇರುವ ಹಳ್ಳದಲ್ಲಿ ನೀರು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಇವರನ್ನು ಕರೆದುಕೊಂಡು ಬಂದಿದ್ದ ವಾಹನ ಚಾಲಕ ಹಳ್ಳ ದಾಟಲು ಸಾಧ್ಯವಿಲ್ಲ ಎಂದು, ಅಲ್ಲಿಯೇ ಇಳಿಸಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಒಂದಿಷ್ಟು ಜನ ಕೂಲಿಕಾರ್ಮಿಕರು ಹಳ್ಳ ದಾಟಿದ್ದಾರೆ. ಆದರೆ ಭುವನೇಶ್ವರಿ, ಗಿರಿಜಾ, ಪವಿತ್ರಾ ಮತ್ತು ವೀಣಾ ಹಳ್ಳ ದಾಟಲು ಆಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಈ ನಾಲ್ವರ ಶವಗಳು ಪತ್ತೆಯಾಗಿವೆ.
ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ : ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸಚಿವ ಹಾಲಪ್ಪ ಆಚಾರ್ ಅವರು, ಎನ್ ಡಿಆರ್ ಎಫ್ ನಿಯಮದಂತೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು. ಜೊತೆಗೆ ಗ್ರಾಮಕ್ಕೆ ಆದಷ್ಟು ಬೇಗ ಸೇತುವೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು.
ಇಬ್ಬರು ಪೊಲೀಸರು ಸಾವು : ಇತ್ತೀಚಿಗಷ್ಟೆ ತೊಂಡಿಹಾಳ ಹಳ್ಳದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಗದಗ ಜಿಲ್ಲೆಯ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಯಲಬುರ್ಗಾ ತಾಲೂಕಿನಲ್ಲಿ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ : ಎಷ್ಟು ಬಾರಿ ಮದುವೆ, ಸದ್ಯ ಯಾರೊಂದಿಗೆ ಸಂಸಾರ.. ಮಹಿಳಾ ಅಧಿಕಾರಿಗೆ ಮಾಹಿತಿ ಕೇಳಿದವನಿಗೆ ಸಂಕಷ್ಟ