ಕೊಪ್ಪಳ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಾದ ಗೋಲ್ಮಾಲ್ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ.
ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮ ಪಂಚಾಯಿತಿ ಪಿಡಿಒ ಯಮನಪ್ಪ ರಾಮತಾಳ, ಮುದೇನೂರು ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ಪವಾರ್, ಹಾಬಲಕಟ್ಟಿ ಗ್ರಾಮ ಪಂಚಾಯತ್ ಪಿಡಿಒ ಚಂದಪ್ಪ ಕವಡಿಕಾಯಿ ಹಾಗೂ ತಳವಗೇರಾ ಗ್ರಾಮ ಪಂಚಾಯತ್ ಪಿಡಿಒ ಶಿವಪುತ್ರಪ್ಪ ಬರಿದೇಲಿ ಅಮಾನತುಗೊಂಡ ಪಿಡಿಒಗಳಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಅವರು ಈ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕುಷ್ಟಗಿ ತಾಲೂಕು ಪಂಚಾಯತ್ ಇಒಗೆ ಸೂಚಿಸಿದ್ದಾರೆ.
ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ 2018-19, 2019-20 ನೇ ಸಾಲಿನಲ್ಲಿ ಆಯಾ ಗ್ರಾಮ ಪಂಚಾಯತ್ ಮೂಲಕ ಅನುಷ್ಠಾನಗೊಂಡ ಚೆಕ್ ಡ್ಯಾಂ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿರುವುದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನಾಲ್ಕೂ ಪಂಚಾಯಿತಿಗಳಿಂದ ಒಟ್ಟು 1,51,78050 ರೂಪಾಯಿ ಹಣ ದುರುಪಯೋಗಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಈ ನಾಲ್ವರು ಪಿಡಿಒಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.