ಕೊಪ್ಪಳ: ತಾಲೂಕಿನ ಹಟ್ಟಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ನಾಲ್ಕು ಮತ ಪತ್ರಗಳು ನಾಪತ್ತೆಯಾದ ಘಟನೆ ನಡೆದಿದೆ.
ನಗರದ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಹಟ್ಟಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ನಲ್ಲಿ ಒಟ್ಟು 841 ಮತಗಳು ಚಲಾವಣೆಯಾಗಿದ್ದವು. ಆದರೆ ಎಣಿಕೆ ಸಂದರ್ಭದಲ್ಲಿ 837 ಮತಗಳು ಮಾತ್ರ ಲೆಕ್ಕಕ್ಕೆ ಸಿಕ್ಕಿವೆ. ಇದರಿಂದ ಚಲಾವಣೆಯಾದ ನಾಲ್ಕು ಮತ ಪತ್ರಗಳು ಎಲ್ಲಿ ಎಂದು ಪ್ರತಿಸ್ಪರ್ಧಿ ಮರಿಯಪ್ಪ ಕರಿಗಾರ ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿದರು.
ನನಗೆ 422 ಮತಗಳು ಬಂದಿದ್ದು, ಪ್ರತಿಸ್ಪರ್ಧಿ ಹಾಲಮ್ಮ ನಗರ ಅವರಿಗೆ 423 ಮತಗಳು ಬಂದಿವೆ. ಒಂದೇ ಒಂದು ಮತದ ಅಂತರವಿದೆ. ಚಲಾವಣೆಯಾಗಿರುವ 841 ಮತಗಳಲ್ಲಿ 837 ಮತ ಪತ್ರಗಳು ಇವೆ. ಉಳಿದ 4 ಮತಗಳು ಎಲ್ಲಿ ಹೋದವು? ಯಾರೇ ಗೆಲ್ಲಲಿ, ಆ ನಾಲ್ಕು ಮತಗಳ ಲೆಕ್ಕ ಕೊಡಿ ಎಂದು ಪಟ್ಟು ಹಿಡಿದರು. ಆ ನಾಲ್ಕು ಮತದಾರರು ಬ್ಯಾಲೆಟ್ ಪೇಪರ್ಅನ್ನು ಮತ ಪೆಟ್ಟಿಗೆಯಲ್ಲಿ ಹಾಕದೆ ಹೋಗಿರಬಹುದು ಎಂದು ಎಣಿಕೆ ಕೇಂದ್ರದ ಚುನಾವಣಾಧಿಕಾರಿ ಸಮಜಾಯಿಷಿ ನೀಡಿ 423 ಮತ ಪಡೆದ ಹಾಲಮ್ಮರನ್ನು ಜಯ ಗಳಿಸಿದ್ದಾರೆ ಎಂದು ಘೋಷಣೆ ಮಾಡಿದರು.