ಕೊಪ್ಪಳ : ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿದವರನ್ನೇ ಮನೆಬಿಟ್ಟು ಹೊರಗೆ ಹಾಕಿದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೋವಿಂದ ಕಾರಜೋಳ ಬಿಜೆಪಿಗೆ ಬರುವ ಮೊದಲು ಬಿಜೆಪಿಯಲ್ಲಿ ದೀಪ ಹಚ್ಚುವರು ಯಾರೂ ಇರಲಿಲ್ಲ. ನಾವು ಅಲ್ಲಿ ದೀಪ ಹಚ್ಚಿದ ಬಳಿಕ ಕಾರಜೋಳ ಬಂದವರು.
ನಾವು ಈಗ ಕಾಂಗ್ರೆಸ್ಸಿಗೆ ಬಂದಿದ್ದೇವೆ. ಈ ಕಾಂಗ್ರೆಸ್ನಲ್ಲಿ ನಾವು ದೀಪವನ್ನು ಹಚ್ಚೆ ಹಚ್ಚುತ್ತೇವೆ. ಅದರ ಬಗ್ಗೆ ಕಾರಜೋಳ ಸಾಹೇಬರು ಚಿಂತೆ ಮಾಡೋ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಆಡಳಿತ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ : ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಯಾರೊಬ್ಬರೂ ಇರೋದಿಲ್ಲ. ಬಿಜೆಪಿ ಆಡಳಿತದ ಬಗ್ಗೆ ಜನರು ರೊಚ್ಚಿಗೆದ್ದಿದ್ದಾರೆ. ಬಿಜೆಪಿಯನ್ನು ಸ್ವಯಂ ಕಿತ್ತೊಗೆಯಲು ಮುಂದಾಗಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಕಿಟಕಿ ಬಾಗಿಲು ಎಲ್ಲವೂ ಇದೆ. ಬಿಜೆಪಿಯವರು ತಮ್ಮ ಕಿಟಕಿ ಬಾಗಿಲು ನೋಡಿಕೊಂಡರೆ ಸಾಕು. ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅವರಿಬ್ಬರು ಇಲ್ಲದಿದ್ದರೆ ಬಿಜೆಪಿ ಅನ್ನುವ ಪಕ್ಷವೇ ರಾಜ್ಯದಲ್ಲಿ ಇರುತ್ತಿರಲಿಲ್ಲ. ಸದ್ಯ ಅವರನ್ನು ಹೊರಗಿಟ್ಟಿರುವ ಪಕ್ಷಕ್ಕೆ ಮುಂದೆ ಯಾರೂ ದಿಕ್ಕಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ತತ್ವ ಸಿದ್ಧಾಂತ ಪಥ್ಯ ಆಗಲಿಲ್ಲವೆಂದರೆ ಪಕ್ಷ ಬಿಟ್ಟು ಹೋಗಲಿ: ಹಳ್ಳಿಹಕ್ಕಿಗೆ ಕುಟುಕಿದ ಪ್ರತಾಪಸಿಂಹ