ಕೊಪ್ಪಳ: ಬಿಜೆಪಿ ಕೇವಲ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು.
ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ತಿನ್ನೋದಿಲ್ಲ, ತಿನ್ನೋಕು ಬಿಡೋದಿಲ್ಲ ಎಂದು ಮೋದಿ ಹೇಳ್ತಾರೆ. ಆದರೆ ರಾಜ್ಯ ಸರ್ಕಾರದಲ್ಲಿ ಹಗಲು ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪ ಏನು ಹೇಳ್ತಾರೆ?. ಜಾತಿ, ಧರ್ಮ ಹಿಡಿದುಕೊಂಡು ಇಡೀ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬಿಜೆಪಿಯವರು ಕೆಡಿಸುತ್ತಿದ್ದಾರೆ ಎಂದರು.
ಮೋದಿ ಈ ಹಿಂದೆ ಇಲ್ಲಿಗೆ ಬಂದಾಗ ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟೇಜ್ ಸರ್ಕಾರ ಎಂದು ಹೇಳಿದ್ದರು. ಈಗ ಯಡಿಯೂರಪ್ಪ ಸರ್ಕಾರ ಏನಾಗಿದೆ?. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಬಿಟ್ಟರೆ ಮತ್ತೇನೂ ಇಲ್ಲ. ರಾಜ್ಯ ಬಿಜೆಪಿ ಸರ್ಕಾರ ಆಯೋಗ್ಯ ಸರ್ಕಾರವಾಗಿದೆ. ಈ ಸರ್ಕಾರದ ಸಾಧನೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದ ಹಣ ಬಳಸಿಕೊಂಡು ಚುನಾವಣೆಯಲ್ಲಿ ಮತದಾರರಿಗೆ ಬಿಜೆಪಿ ಹಣ ಹಂಚುತ್ತಿದೆ. ಆದರೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಬಿಜೆಪಿಯವರಿಗೆ ಆಡಳಿತದ ಅನುಭವವಿಲ್ಲ. ಆರ್ಥಿಕ ವ್ಯವಸ್ಥೆಯನ್ನು ಹೇಗೆ ಸುಧಾರಣೆ ಮಾಡಬೇಕು ಎಂಬುದು ಗೊತ್ತಿಲ್ಲ.
ಬೇರೆ ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಂತಹ ಅನಿವಾರ್ಯತೆ ಏನಿತ್ತು?, ನೀತಿಯ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ. ಆದರೆ ಅವರು ಮಾಡುತ್ತಿರೋದು ಮಾತ್ರ ಅನೀತಿಯ ಕೆಲಸ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಟೀಕಿಸಿದರು.