ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಗಾಳಿ ದುರುಗಪ್ಪ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ ನುಡಿಸುವ ಸಂಗೀತಕ್ಕೆ ದೇಶಿಯರು ಅಷ್ಟೇ ಅಲ್ಲದೆ, ವಿದೇಶಿಗರು ಕೂಡಾ ಫಿದಾ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಜನಾರ್ಧನರೆಡ್ಡಿ ಅಂತವರು ಗಾಳಿ ದುರುಗಪ್ಪನ ಸಂಗೀತದ ನೀನಾದಕ್ಕೆ ತಲೆ ದೂಗಿದ್ದರು.
ಅಂದ ಹಾಗೆ, ದುರುಗಪ್ಪ ಅವರು ದುಬಾರಿ ಬೆಲೆಯ ಯಂತ್ರ ಅಥವಾ ಸಂಗೀತದ ಪರಿಕರಗಳನ್ನು ಬಳಸುವುದಿಲ್ಲ. ಬದಲಿಗೆ ಗುಡ್ಡಗಾಡು ಜನಾಂಗ ಬಳಸುವ ವಿಶಿಷ್ಟ ಮಾದರಿಯ ಪರಿಕರಗಳನ್ನೇ ಬಳಸುತ್ತಾರೆ. ಇವರು ಯಾರ ಬಳಿಯೂ ಹೋಗಿ ಸಂಗೀತ ಕಲಿತಿಲ್ಲ. ಬದಲಿಗೆ ಆಸಕ್ತಿ, ಅಭ್ಯಾಸದಿಂದ ಸಂಗೀತವನ್ನು ಕಲಿತಿದ್ದಾರೆ.
ವಿರುಪಾಪುರ ಗಡ್ಡೆ, ಆನೆಗೊಂದಿ, ಹಂಪಿಯ ಪ್ರವಾಸಕ್ಕೆಂದು ಬರುವ ನೂರಾರು ವಿದೇಶಿಗರು ಗಾಳಿ ದುರುಗಪ್ಪನ ಸಂಗೀತಕ್ಕೆ ಮನಸೋತಿದ್ದಾರೆ. ಅಲ್ಲದೇ ಕೆಲ ವಿದೇಶಿಗರು ಅವರು ತಂದ ಸಂಗೀತದ ಪರಿಕರಗಳನ್ನು ನುಡಿಸುವುದನ್ನು ಇವರಿಗೆ ಕಲಿಸಿಕೊಟ್ಟು, ಅವನ್ನು ಅವರಿಗೆ ನೀಡಿ ಸಹ ಹೋಗಿದ್ದಾರೆ. ಆಸ್ಟ್ರೇಲಿಯಾ, ಸ್ವಿಡ್ಜರ್ಲ್ಯಾಂಡ್ ಮತ್ತು ಆಫ್ರಿಕಾದ ಜಾಂಬಿಯಂತ ಗುಡ್ಡಗಾಡು ಪ್ರದೇಶದ ಪರಿಕರಗಳನ್ನು ಕೆಲ ವಿದೇಶಿಗರು ಕೊಟ್ಟಿದ್ದಾರೆ ಎಂದು ಗಾಳಿ ದುರುಗಪ್ಪ ಹೇಳುತ್ತಾರೆ.
ಇದನ್ನೂ ಓದಿ: ಗಂಗಾವತಿ: ಪೌರ ನೌಕರರಿಂದ ಆಶೀರ್ವಾದ ಪಡೆದ ಕಾಂಗ್ರೆಸ್ ಸದಸ್ಯೆ