ಕುಷ್ಟಗಿ (ಕೊಪ್ಪಳ): ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳನ್ನು ಸಹಾಯಕಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮದ ಹೊರವಲಯದ ಕಲಾಲಬಂಡಿ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ- 4ರಲ್ಲಿ ಆಹಾರ ಪದಾರ್ಥಗಳನ್ನು ಸಹಾಯಕಿ ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಂದ್ ಆಗಿರುವ ಸಂದರ್ಭ ಯಾರೂ ಇಲ್ಲದ ವೇಳೆ, ಸಹಾಯಕಿ ಗುಂಡಮ್ಮ 2 ಮೂಟೆಯಲ್ಲಿ ತಮ್ಮ ಸಂಬಂಧಿಕನ ಸಹಾಯ ಬಳಸಿಕೊಂಡು ಬೈಕ್ ನಲ್ಲಿ ಸಾಗಿಸುತ್ತಿದ್ದಳು.
ಇದನ್ನು ಗಮನಿಸಿದ ಸಾರ್ವಜನಿಕರು, ತಡೆದು ವಿಚಾರಿಸಿದಾಗ ಈ ಅಕ್ರಮ ಬಯಲಾಗಿದೆ. 8 ಪ್ಯಾಕೇಟ್ ಶೇಂಗಾ, 4 ಖಾದ್ಯ ತೈಲದ ಪ್ಯಾಕೇಟ್, ಹೆಸರು ಕಾಳು, ಗೋಧಿ ರವಾ, ಸಕ್ಕರೆ, ಬೆಲ್ಲ, ಪೌಷ್ಟಿಕ ಆಹಾರದ ಪ್ಯಾಕೆಟ್ಗಳಿದ್ದವು. ಅಲ್ಲದೇ ಸಹಾಯಕಿ ಜಾನುವಾರುಗಳಿಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಸಮಜಾಯಿಷಿಗೆ ಮುಂದಾಗಿದ್ದಳು. ಆಕೆ ಕ್ಷಮೆ ಕೇಳಿದರೂ ಬಿಡದ ಸಾರ್ವಜನಿಕರು ಅಹಾರ ಪದಾರ್ಥಗಳನ್ನು ಪುನಃ ಅಂಗನವಾಡಿಗೆ ತೆಗೆದುಕೊಂಡು ಹೋಗಲಾಯಿತು.
ಈ ಕುರಿತು ಸಹಾಯಕಿ ವಿರುದ್ಧ ಗ್ರಾಮಸ್ಥರು ಸಿಡಿಪಿಓ ಅವರಿಗೆ ದೂರು ಸಲ್ಲಿಸಿದ್ದಾರೆ.