ಗಂಗಾವತಿ: ಅನರ್ಹರಿಗೆ ಪಡಿತರ ಚೀಟಿ ವಿತರಣೆಯಾಗಿದ್ದು, ಈಗಾಗಲೇ ಕೆಲ ಜನ ಸ್ವಯಂ ಪ್ರೇರಣೆಯಿಂದ ಹಿಂತಿರುಗಿಸಿದ್ದಾರೆ. ಇನ್ನು ಸಾಕಷ್ಟು ಪ್ರಮಾಣದಲ್ಲಿ ತಾಲೂಕಿನಲ್ಲಿ ಪಡಿತರ ಚೀಟಿಗಳು ಹಿಂದಿರುಗಬೇಕಿವೆ. ಈ ಕುರಿತು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ರವಾನಿಸಿದ್ದಾರೆ.
ಮಿನಿ ವಿಧಾನಸೌಧದ ಆಹಾರ ಇಲಾಖೆಯ ಕಚೇರಿಯಲ್ಲಿ ಪಡಿತರ ವಿತರಕರ ತುರ್ತು ಸಭೆ ನಡೆಸಿದ ಬಳಿಕ ಮಾತನಾಡಿದ ಆಹಾರ ಇಲಾಖೆಯ ಗ್ರಾಮೀಣ ವೃತ್ತ ನಿರೀಕ್ಷಕ ಇಮಾಮ್ಸಾಬ್ ಹೆಚ್. ಬಾಗಲಿ ಅವರು, ಅನರ್ಹರಿಗೆ ಸಿಕ್ಕಿರುವ ಪಡಿತರ ಚೀಟಿಯ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬಡವರಿಗೆ ಸಿಗಬೇಕಿರುವ ಸರ್ಕಾರಿ ಸೌಲಭ್ಯಗಳು ಶ್ರೀಮಂತರ ಪಾಲಾಗುತ್ತಿವೆ. ಈ ಹಿನ್ನೆಲೆ ಅತಿಕ್ರಮವಾಗಿ ಇರಿಸಿಕೊಂಡಿರುವ ಪಡಿತರ ಚೀಟಿಗಳ ಬಗ್ಗೆ ಆಹಾರ ಹಂಚಿಕೆದಾರರೂ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು. ವಾರದಲ್ಲಿ ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು.