ಕೊಪ್ಪಳ : ಕೊರೊನಾ ಕಂಟ್ರೋಲ್ ಮಾಡಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಪದೇ ಪದೇ ಹೇಳುವ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರ ಕಾರ್ಯಕ್ರಮದಲ್ಲೇ ಜನಜಂಗುಳಿ ಸೇರಿ ಸಾಮಾಜಿಕ ಅಂತರ ಮಾಯವಾಗಿತ್ತು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆಗಾಗಿ ನಗರದ ಗೋಶಾಲೆ ಬಳಿ ಇರುವ ಶ್ರೀ ಮಹಾವೀರ ಜೈನ ಸಮುದಾಯದ ಕಲ್ಯಾಣ ಮಂಟದ ಆವರಣದಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಲಾಕ್ಡೌನ್ ಹಿನ್ನಲೆ ಜನಜಂಗುಳಿ ಸೇರುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ನೀಡಿದ್ದರೂ ಕೂಡ, ಅದನ್ನು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲೆಯ ಜನರಿಗೆ ಕರೆ ನೀಡುತ್ತಿದ್ದರೂ ಅದಕ್ಕೆ ಕ್ಯಾರೆ ಎನ್ನದೇ ಜನ ಅಂಟಿಕೊಂಡೇ ಓಡಾಡುತ್ತಿದ್ದರು.
ಇನ್ನು ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಶಾಸಕರನ್ನು ಪ್ರಶ್ನಿಸಿದಾಗ, ಫುಡ್ ಕಿಟ್ಗಳಿರುವ ವಾಹನಗಳನ್ನು ತೆಗೆದುಕೊಂಡು ಹೋಗಲು ನಾವು ಪಕ್ಷದ ಒಂದಿಬ್ಬರು ಮುಖಂಡರು ಬನ್ನಿ ಎಂದು ಹೇಳಿದ್ದೆವು. ಆದರೆ ಇಷ್ಟೊಂದು ಜನ ಸೇರಿದ್ದಾರೆ ಎಂದು ಸಬೂಬು ನೀಡಿದರು.