ಕುಷ್ಟಗಿ (ಕೊಪ್ಪಳ): ಕೊರೊನಾ ತೊಂದರೆ ಆರಂಭವಾದಾಗಿನಿಂದ ಬಡಬಗ್ಗರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಆದರೆ ಕುಷ್ಟಗಿಯಲ್ಲಿ ಆಹಾರ ಪದಾರ್ಥಗಳ ಕಿಟ್ ಕೊರತೆ ಕಂಡುಬಂದಿದ್ದು ಕಿಟ್ ದೊರೆಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ಗತಿಕ ಕುಟುಂಬಗಳಿಗೆ 500ಕ್ಕೂ ಅಧಿಕ ಆಹಾರ ಸಾಮಗ್ರಿ ಕಿಟ್ಗಳ ಬೇಡಿಕೆ ಹೆಚ್ಚಾಗಿದ್ದು, ಪುರಸಭೆಗೆ ಇದನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ದಾನಿಗಳು ಪುರಸಭೆಗೆ ನೀಡಿರುವ ಕಿಟ್ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವಂತೆ ತಾಲೂಕು ಆಡಳಿತ ಪುರಸಭೆಯವರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಿಟ್ ಪಡೆಯುವವರ ಹೆಸರು, ವಿವರಗಳನ್ನು ದಾಖಲಿಸಿಕೊಂಡು ಕಿಟ್ ವಿತರಿಸಲಾಗುತ್ತಿದೆ.
ಆದರೆ ಸಮಸ್ಯೆ ಹೇಳಿಕೊಂಡು ಪುರಸಭೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ನಿಭಾಯಿಸುವುದು ಪುರಸಭೆಗೆ ಅನಿವಾರ್ಯವಾಗಿದೆ. ಬೇಕಾದವರಿಗೆ ಮಾತ್ರ ಕಿಟ್ ವಿತರಿಸಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಕಿಟ್ ಬೇಡಿಕೆ ಸಲ್ಲಿಸುವವರಿಗೆ ಕೂಡಾ ಸಮಜಾಯಿಷಿ ನೀಡಿ ಪರಿಸ್ಥಿತಿ ಅರ್ಥ ಮಾಡಿಸುವಷ್ಟರಲ್ಲಿ ಪುರಸಭೆಯವರಿಗೆ ಕೂಡಾ ಸಾಕು ಸಾಕಾಗಿದೆ.