ಗಂಗಾವತಿ : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಲಾಕ್ಡೌನ್ ಮೊರೆ ಹೋಗಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆಂದು ಮನೆಯಿಂದ ಹೊರ ಬಂದ ಬಹುತೇಕರಿಗೆ ರಾಜ್ಯದೆಲ್ಲೆಡೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಪೊಲೀಸರು ಮಾತ್ರ ಹೂವು ಕೊಟ್ಟು ಸವಾರರನ್ನು ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿ ಗಮನ ಸೆಳೆದಿದ್ದಾರೆ.
ಇಲ್ಲಿನ ಮಹಾತ್ಮಗಾಂಧಿ ವೃತ್ತ, ಮಹಾವೀರ ವೃತ್ತ, ಜುಲಾಯಿನಗರ, ಸಿಬಿಎಸ್ ಸರ್ಕಲ್ ಸೇರಿ ನಗರದ ನಾನಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ವಾಹನ ಸವಾರರಿಗೆ ಗುಲಾಬಿ ನೀಡುವ ಮೂಲಕ ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ನಗರಠಾಣೆಯ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿ ನಗರಠಾಣೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಹೂವಿನ ಸ್ವಾಗತ ನೀಡಿ, ಅನಗತ್ಯ ಹೊರಗೆ ಓಡಾಡಬೇಡಿ.
ಇದು ಹೂವಿನ ಮನವಿ, ಮಾತು ತಪ್ಪಿದರೆ ಲಾಠಿ ರುಚಿ ಕಾಣುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿ ಅರಿವು ಮೂಡಿಸಿದ್ದಾರೆ.
ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!