ಗಂಗಾವತಿ : ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಯಕ್ಷಗಾನ ಕಲಾ ಪ್ರಕಾರವನ್ನು ಇದೇ ಮೊದಲ ಬಾರಿಗೆ ಬಯಲುಸೀಮೆ ಪ್ರದೇಶ ಆನೆಗೊಂದಿ ಪರಿಸರದಲ್ಲಿ ಆಯೋಜಿಸಲಾಗಿತ್ತು.
ಖ್ಯಾತ ಕಲಾವಿದ ಕೆರೆಮನೆ ಶಂಭು ಹೆಗ್ಡೆ ಅವರ ಪುತ್ರ ಶಿವಾನಂದ ಹೆಗಡೆ ನೇತೃತ್ವದಲ್ಲಿ ತಾಳಮದ್ದಲೆ ಮೂಲಕ ಕಲಾವಿದರು 'ಮುಸ್ಸಂಜೆಯ ಸಭಾ ಸೊಬಗು' ಎಂಬ ಶೀರ್ಷಿಕೆಯಡಿ 'ಕಿಷ್ಕಿಂಧಾ ಪರ್ವ' ಎಂಬ ಕಥಾ ಪ್ರಸಂಗವನ್ನು ನಡೆಸಿಕೊಟ್ಟರು. ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಇನ್ನು, ಕಾರ್ಯಕ್ರಮದಲ್ಲಿ ಸಾಹಿತಿ ನೂರಾಲ ದೇವಿಪ್ರಸಾದ, ಕಲಾವಿದರಾದ ಅನಂತ ವೈದ್ಯ ಯಲ್ಲಾಪುರ, ನಾರಾಯಣ ಸಾಲೆಬೈಲು, ಕೆರೆ ಮನೆ ಶ್ರೀಧರ ಹೆಗ್ಡೆ, ನರಸಿಂಹ ಹೆಗ್ಡೆ, ಆನೆಗೊಂದಿಯ ಅರಸು ಮನೆತನದ ಲಲಿತಾರಾಣಿ, ಶ್ರೀಕೃಷ್ಣ ದೇವರಾಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.