ಗಂಗಾವತಿ: ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಕೊಪ್ಪಳ ಜಿಲ್ಲೆಯ ಮೊದಲ ಕೃಷಿಕರ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಗೆ ಮೊದಲ ಕೃಷಿಕ ಭವನ ನಿರ್ಮಾಣಕ್ಕೆ ಕೃಷಿ ಇಲಾಖೆಯ ಕೇಂದ್ರ ಸಂಸ್ಥೆಯಿಂದ 16 ಲಕ್ಷ ಮೊತ್ತದ ಅನುದಾನ ಸಿಕ್ಕಿದೆ. ಈ ಪೈಕಿ ಮೊದಲ ಹಂತದಲ್ಲಿ ಎಂಟು ಲಕ್ಷ ಬಿಡುಗಡೆಯಾಗಿದೆ ಎಂದರು.
ಅಲ್ಲದೇ ಈ ಕೂಡಲೆ ಕಾಮಗಾರಿ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಇನ್ನುಳಿದ ಅನುದಾನ ಸಿಗಲಿದೆ. ಅಲ್ಲದೇ ಶಾಸಕರ ಅನುದಾನ, ಎಪಿಎಂಸಿ ಮತ್ತು ಜಿಲ್ಲಾ ಪಂಚಾಯಿತಿ ಅನುದಾನವನ್ನೂ ಕೃಷಿಕ ಭವನ ನಿರ್ಮಾಣಕ್ಕೆ ಪಡೆದುಕೊಳ್ಳಲು ಅವಕಾಶವಿದೆ. ಈ ಬಗ್ಗೆ ಅನುದಾನ ಹೊಂದಿಸುವುದಾಗಿ ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ, ಮಾಜಿ ಶಾಸಕ ಜಿ. ವೀರಪ್ಪ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಸಣ್ಣಕ್ಕಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಾಳಗಿ ಇದ್ದರು. ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಜಂಬಣ ಐಲಿ ಅವರನ್ನು ಗೌರವಿಸಲಾಯಿತು.