ಗಂಗಾವತಿ: ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬನ ಅಸಹಜ ಸಾವಿಗೆ ಕಾರಣವಾಗಿರುವ ಆರೋಪದಡಿ ಜೆಸ್ಕಾಂ ಕಿರಿಯ ಇಂಜಿನಿಯರ್ ಮಂಜುನಾಥ ಮತ್ತು ಗುತ್ತಿಗೆದಾರ ಹರೀಶ್ ಮತ್ತು ಲೈನ್ಮ್ಯಾನ್ ಮೇಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹೊಸಳ್ಳಿ ಗ್ರಾಮದ ನೀಲಕಂಠಪ್ಪ ಎಂಬುವವರ ಹೊಲದಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಕೂಲಿಕಾರ ನಾಗರಾಜ್ ಮಲ್ಲಿಕಾರ್ಜುನ (23) ಸುಳೇಕಲ್ ಎಂಬ ಯುವಕ ಸಾವನ್ನಪ್ಪಿದ್ದ. ಇದೀಗ ಜೆಸ್ಕಾಂ ಕಿರಿಯ ಇಂಜಿನಿಯರ್ ಹಾಗೂ ವಿದ್ಯುತ್ ಗುತ್ತಿಗೆದಾರನ ನಿರ್ಲಕ್ಷ್ಯದಿಂದಲೇ ನನ್ನ ಸೋದರ ಅಳಿಯ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಮಾವ ದುರುಗಪ್ಪ ಈರಪ್ಪ ಹೇರೂರು ಎಂಬುವವರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಮಗಾರಿ ಬಾಕಿ ಇದ್ದ ಲೈನ್ನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವುದು ಬಿಟ್ಟು, ಬೇರೆ ಲೈನಿನ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಇದು ಗೊತ್ತಾಗದೇ ನಾಗರಾಜ್ ವಿದ್ಯುತ್ ಕಂಬ ಏರಿದ್ದು, ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಮೃತನ ಮಾವ ದೂರಿನಲ್ಲಿ ಆರೋಪಿಸಿದ್ದಾರೆ.