ಗಂಗಾವತಿ: ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಜನರ ಸೇವೆ ಮಾಡಿದ್ದಾರೆ. ಅವರಿಗೆ ಏನೇ ಕೊಟ್ಟರೂ, ಸನ್ಮಾನ ಮಾಡಿದರೂ ಅವರ ಸೇವೆಗೆ ಸಮವಲ್ಲ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಹೇಳಿದ್ದಾರೆ.
ತಾಲೂಕಿನ ಶ್ರೀರಾಮನಗರದ ಶ್ರೀರಾಮ ದೇವಸ್ಥಾನದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವಾರಿಯರ್ಸ್ ಜನರ ಮನೆ ಬಾಗಿಲಿಗೆ ತೆರಳಿ ಅಗತ್ಯ ವಸ್ತುಗಳನ್ನು ತಲುಪಿಸಿದ್ದಾರೆ. ಸೋಂಕು ಸಮುದಾಯಕ್ಕೆ ಹರಡುತ್ತಿರುವ ಸಂದರ್ಭದಲ್ಲೂ ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಜನರ ಸೇವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇವರ ಸೇವೆಯನ್ನು ಸಮಾಜ ಎಂದಿಗೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಈ ವೇಳೆ ಪಕ್ಷದ ಪ್ರಮುಖ ನಾಯಕರು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.