ಗಂಗಾವತಿ: ತುಂಗಭದ್ರಾ ಎಡದಂಡೆ ನಾಲೆಗೆ ಅನಧಿಕೃತವಾಗಿ ಪೈಪ್ ಅಳವಡಿಸಿಕೊಂಡು ನೀರು ಪಡೆಯುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿದ ರೈತರು, ಪೈಪ್ಗಳನ್ನು ಸುಟ್ಟು ಹಾಕಿದ ಘಟನೆ ಕಾರಟಗಿ ಸಮೀಪ ನಡೆದಿದೆ.
ಕಾರಟಗಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ವಿತರಣಾ ಕಾಲುವೆ 31ರಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ನಾಲ್ಕು ಇಂಚು ಗಾತ್ರದ ಪೈಪ್ಗಳನ್ನು ರೈತರು ಸುಟ್ಟು ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ : ಕೆರೆಗಳಿಗೆ ನೀರು ತುಂಬಿಸುವಂತೆ ಪ್ರತಿಭಟನೆ: ಜಿಲ್ಲಾಡಳಿತ ಭವನದ ಒಳಗೆ ನುಗ್ಗಿದ ಪ್ರತಿಭಟನಾಕಾರರು
ಈ ಬಗ್ಗೆ ಪ್ರತಿಕ್ರಿಯಿಸಿದ ರೈತರು, ಕೆಲವರು ಅಕ್ರಮವಾಗಿ ನೀರು ಪಡೆಯುತ್ತಿರುವುದರಿಂದ, ಅಧಿಕೃತವಾಗಿ ನೀರು ಪಡೆಯುವ ಕೆಲ ಭಾಗದ ರೈತರಿಗೆ ನೀರಿನ ಕೊರತೆಯಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಮ್ಮ ಹಿತಾಸಕ್ತಿ ನಾವೇ ಕಾಪಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ರೈತರ ತಂಡದಿಂದಲೇ ಪಹರೆ ಕಾಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.