ಕುಷ್ಟಗಿ (ಕೊಪ್ಪಳ): ಸಾಲಬಾಧೆಗೆ ರೈತ ಬಲಿಯಾಗಿದ್ದು, ತಮ್ಮದೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ಕುಷ್ಟಗಿ ಪಟ್ಟಣದ ಹಳೆ ಬಜಾರ್ ನಿವಾಸಿ ಉಮೇಶ ಗುರುಸಿದ್ದಯ್ಯ ಸರಗಣಾಚಾರ (45) ಆತ್ಮಹತ್ಯೆಗೆ ಶರಣಾಗಿರುವ ರೈತ.
ಪಿತ್ರಾರ್ಜಿತ 15 ಎಕರೆ ಎರೆ ಭೂಮಿ, 4 ಎಕರೆ ಮಸಾರಿ ಜಮೀನು ಹೊಂದಿದ್ದ ಈತ, ಬಾಗಲಕೋಟೆ ಜಿಲ್ಲೆ ಕಮತಗಿ ಶಾಖೆಯ ಲಕ್ಷ್ಮೀ ಸಹಕಾರ ಬ್ಯಾಂಕಿನಲ್ಲಿ 25 ಲಕ್ಷ ರೂ ಸಾಲ ಪಡೆದಿದ್ದ. ಸಾಲದ ಹೊರೆ ತೀರಿಸಲಾಗದೇ ಉಮೇಶ ಕಳೆದ ಗುರುವಾರ ಮಧ್ಯಾಹ್ನ ಮನೆಯಿಂದ ಸಿಂಧನೂರು ರಸ್ತೆಯ ಎರೆಹಳ್ಳದ ಜಮೀನಿಗೆ ತೆರಳಿ ವಿಷ ಸೇವಿಸಿ ಮೃತಪಟ್ಟಿದ್ದಾನೆ.
ಎಂದಿನಂತೆ ಮನೆಗೆ ಉಮೇಶ ಬಾರದಿದ್ದಾಗ ಕುಟುಂಬದವರು ಗಾಬರಿಗೊಂಡು ಫೋನ್ ಕಾಲ್ ಮಾಡಿದ್ದಾರೆ. ಆದ್ರೆ ಮೊಬೈಲ್ ಸ್ವಿಚ್ಡ್ ಆಫ್ ಎಂದು ಬಂದಿದೆ. ನಂತರ ಹೊಲಕ್ಕೆ ಹೋಗಿ ನೋಡಿದಾಗ ಉಮೇಶ ಶವವಾಗಿ ಪತ್ತೆಯಾಗಿದ್ದ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸ್ಥಳಕ್ಕೆ ತಹಶೀಲ್ದಾರ್ ಎಂ ಸಿದ್ದೇಶ, ಪಿಎಸ್ಐ ಚಿತ್ತರಂಜನ ನಾಯಕ್, ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಭೇಟಿ ನೀಡಿದ್ದರು. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.