ಕೊಪ್ಪಳ: ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರು ಭಾಗದಲ್ಲಿ ದಸರಾ ಗೊಂಬೆಗಳನ್ನು ಕೂರಿಸುವುದು ಕಾಮನ್. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸುವುದು ಅಪರೂಪ. ಕೊಪ್ಪಳದಲ್ಲಿ ಕುಟುಂಬವೊಂದು ಈ ಹಿಂದಿನಿಂದಲೂ ಗೊಂಬೆಗಳನ್ನು ಕೂರಿಸಿ ಪೂಜಿಸುತ್ತಾ ಬಂದಿದೆ.
ಮೈಸೂರು ಭಾಗದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ವಿವಿಧ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಿ, ಬಂಧು ಬಾಂಧವರನ್ನು ಕರೆದು ಬಾಗಿನ ಕೊಡುವುದು ಸಂಪ್ರಾದಾಯ. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ದಸರಾ ಹಬ್ಬದಲ್ಲಿ ಗೊಂಬೆಗಳನ್ನು ಕೂರಿಸುವುದು ಅಪರೂಪ.
ಕೊಪ್ಪಳ ನಗರದ ದೇವರಾಜ್ ಅರಸ್ ಕಾಲೋನಿಯಲ್ಲಿರುವ ನಾಗರತ್ನಮ್ಮ ಗದಗ ಎಂಬುವವರ ಕುಟುಂಬ ದಸರಾ ಹಬ್ಬದ ಆಯುಧ ಪೂಜೆಯ ದಿನ ದಸರಾ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಿ ಸಂಭ್ರಮಿಸುತ್ತಿದೆ. ನಾಗರತ್ನಮ್ಮ ಪತಿ ಜಿ. ವೀರಣ್ಣ ಅವರು ಮೊದಲು ಜೋಗದಲ್ಲಿ ಕೆಪಿಸಿ ನೌಕರರಾಗಿದ್ದರು.
ಆ ಸಂದರ್ಭದಲ್ಲಿ ನಾಗರತ್ನಮ್ಮ ಅವರು ಅಲ್ಲಿಯ ಜನ ದಸರಾ ಗೊಂಬೆಗಳನ್ನು ಕೂರಿಸುವುದನ್ನು ನೋಡಿ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂಡಿಸುತ್ತಿದ್ದರು.
ಕಳೆದ 15 ವರ್ಷಗಳಿಂದ ಅವರು ಈಗ ಕೊಪ್ಪಳದಲ್ಲಿ ನೆಲೆಸಿದ್ದಾರೆ. ಈಗಲೂ ಸಹ ಅಲ್ಲಿಯ ಸಂಪ್ರದಾಯವನ್ನು ನಾಗರತ್ನಮ್ಮ ಇಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ರಾಮಾಯಣ, ಮಹಾಭಾರತದ ಕಥೆಯ ಗೊಂಬೆಗಳು ಸೇರಿ ವಿವಿಧ ನೂರಾರು ಗೊಂಬೆಗಳನ್ನು ಮುಂಜಾನೆಯಿಂದಲೇ ಅಂದವಾಗಿ ಜೋಡಿಸಿ ಈ ಮಧ್ಯೆ ದೇವಿಯ ಪೂಜೆಯೊಂದಿಗೆ ಗೊಂಬೆಗಳ ಪೂಜೆಯನ್ನು ಸಹ ಮಾಡುತ್ತಾರೆ.
ಈ ಸಂದರ್ಭದಲ್ಲಿ ಅಕ್ಕ ಪಕ್ಕದ ಮಹಿಳೆಯರನ್ನು ಕರೆದು ಅವರಿಗೆ ಬಾಗಿನ ನೀಡುವ ಸಂಪ್ರಾದಾಯ ಪಾಲಿಸುತ್ತಾ ಬರುತ್ತಿದ್ದಾರೆ. ಬಾಗಿನ ಪಡೆಯಲು ಬರುವವರು ಈ ಗೊಂಬೆಗಳನ್ನು ನೋಡಿ ಆನಂದಿಸುತ್ತಾರೆ. ಈ ಮೊದಲು ಇನ್ನೂ ವಿಜೃಂಭಣೆಯಿಂದ ಗೊಂಬೆಗಳನ್ನು ಕೂರಿಸುತ್ತಿದ್ದೆವು. ಆದರೆ, ಈಗ ಕೊರೊನಾ ಹಿನ್ನೆಲೆಯಲ್ಲಿ ಜನರನ್ನು ಕರೆಯುತ್ತಿಲ್ಲ. ಸಾಂಪ್ರದಾಯಿಕವಾಗಿ ದಸರಾ ಗೊಂಬೆಗಳನ್ನು ಕೂರಿಸುತ್ತೇವೆ ಎನ್ನುತ್ತಾರೆ ನಾಗರತ್ನಮ್ಮ ಹಾಗೂ ಅವರ ಸೊಸೆ ಸುಷ್ಮಾ.