ಗಂಗಾವತಿ: ಖಾದ್ಯ ತೈಲದ ಪ್ಯಾಕೆಟ್ ಖರೀದಿಸಿದ ಗ್ರಾಹಕನಿಗೆ ಮುದ್ರಿತ ಎಂಆರ್ಪಿಗಿಂತ ಹೆಚ್ಚಿನ ಹಣ ಪಡೆದ ಇಲ್ಲಿನ ಹೋಂ ನೀಡ್ಸ್ ಎಂಬ ಅಂಗಡಿ ಮಾಲೀಕನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಹೆಚ್ಚುವರಿ ವಸೂಲಿ ಮಾಡಿದ ಹಣಕ್ಕೆ 110 ಪಟ್ಟು ಹೆಚ್ಚು ಮೊತ್ತದ ದಂಡ ವಿಧಿಸಿದೆ.
ಇಲ್ಲಿನ ನೀಲಕಂಠೇಶ್ವರ ವೃತ್ತದಲ್ಲಿರುವ (ರಿಲಾಯನ್ಸ್ ಸ್ಮಾರ್ಟರ್ ಪಾಯಿಂಟ್ ಎದುರು) ಅಂಗಡಿಯಲ್ಲಿ ಆಚಾರನರಸಾಪುರ ಗ್ರಾಮದ ಮಂಜುನಾಥ ಎಂಬ ಗ್ರಾಹಕರು ರುಚಿಗೋಲ್ಡ್ ಎಂಬ ಎಣ್ಣೆ ಖರೀದಿಸಿದ್ದರು. ನಾಲ್ಕು ಪಾಕೆಟ್ ಎಣ್ಣೆ ಖರೀದಿಸಿದ್ದ ಗ್ರಾಹಕನಿಗೆ ಮುದ್ರಿತ ಬೆಲೆ ರೂ 146ರ ಬದಲಿಗೆ ಅಂಗಡಿ ಮಾಲೀಕ ಮಂಜುನಾಥ ದತ್ತಾ 158 ರೂ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಗ್ರಾಹಕ, ಆರಂಭದಲ್ಲಿ ಅಂಗಡಿ ಮಾಲೀಕರಲ್ಲಿ ಹೆಚ್ಚುವರಿ ಹಣ ಮರಳಿಸುವಂತೆ ಮನವಿ ಮಾಡಿದ್ದರು.
ಆದರೆ ಅಂಗಡಿ ಮಾಲೀಕ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದು ಮಂಜುನಾಥ್ ಅನಿವಾರ್ಯವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಕಳೆದ ಮೂರು ತಿಂಗಳಿಂದ ವೇದಿಕೆಯ ನ್ಯಾಯಾಧೀಶರು ಪರ-ವಿರೋಧ ವಾದ ಆಲಿಸಿದ್ದಾರೆ. ಇದೀಗ ವೇದಿಕೆಯು, ಗ್ರಾಹಕನಿಂದ ಪಡೆದ ಹೆಚ್ಚುವರಿ ಮೊತ್ತ 51 ರೂಪಾಯಿ ಮೊತ್ತವನ್ನು ಆದೇಶವಾದ 45 ದಿನದೊಳಗೆ ನೀಡಬೇಕು. ಇದರ ಜೊತೆಗೆ ಸೇವೆಯಲ್ಲಿನ ಕೊರತೆಗಾಗಿ 3,000 ರೂ, ಮಾನಸಿಕ ಹಿಂಸೆಗೆ 2,000 ಹಾಗೂ ಒಂದು ಸಾವಿರ ಮೊತ್ತ ಇತರೆ ಖರ್ಚಿನ ಮೊತ್ತ ನೀಡುವಂತೆ ಆದೇಶಿಸಿದೆ.
ಒಂದು ವೇಳೆ ನಿಗದಿತ 45 ದಿನದೊಳಗೆ ವೇದಿಕೆ ನೀಡಿದ ತೀರ್ಪಿನ ಅನುಸಾರ ಆದೇಶಿತ ಮೊತ್ತ ಪಾವತಿಸಲು ವಿಫಲವಾದಲ್ಲಿ ಶೇ.6ರ ಮೊತ್ತವನ್ನು ಬಡ್ಡಿಸಮೇತ ಪಾವತಿಸಬೇಕಿರುತ್ತದೆ ಎಂದು ವೇದಿಕೆಯ ಮುಖ್ಯಸ್ಥ ಎ.ಜಿ. ಮಾಲ್ದಾರ್ ಆದೇಶಿಸಿದ್ದಾರೆ.
ಇದನ್ನೂ ಓದಿ : ₹918 ಪಿಜ್ಜಾಗಾಗಿ ₹9 ಲಕ್ಷ ದಂಡ ಕಟ್ಟಿದ ಡೊಮಿನೋಸ್.. ಯಾಕೆ ಗೊತ್ತಾ?