ಗಂಗಾವತಿ: ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿನ ಅಕ್ಕಿ ದುರುಪಯೋಗವಾದ ಘಟನೆ ಹಿನ್ನೆಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ಷರ ದಾಸೋಹದ ಅಧಿಕಾರಿಗಳು ಇಲ್ಲಿನ ಪ್ರಾಪರ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಕ್ಷಣ ಇಲಾಖೆಯ ಸಂಯೋಜಕ ಶಂಕ್ರಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶಗೌಡ ಅವರು ಶಾಲೆಗೆ ಭೇಟಿ ನೀಡಿದರು. ಕಿರಾಣಿ ಅಂಗಡಿಗೆ ಸಾಗಿಸಲಾಗಿದ್ದ ಬಿಸಿಯೂಟದ ಅಕ್ಕಿಯನ್ನು ಮರಳಿ ಶಾಲೆಗೆ ತರಿಸಿದ್ದು, ದಾಸ್ತಾನು ಪರಿಶೀಲಿಸಿದರು.
ಅಕ್ಕಿ ದುರುಪಯೋಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ತಾವರೆಪ್ಪ ಕಾರಬಾರಿ ಸೇವೆಯಿಂದ ಅಮಾನತು ಆದ ಹಿನ್ನೆಲೆ, ಪ್ರಭಾರ ಮುಖ್ಯಶಿಕ್ಷಕ ಹುದ್ದೆಯನ್ನು ಅದೇ ಶಾಲೆಯ ಹಿರಿಯ ಶಿಕ್ಷಕಿ ಪದ್ಮಾವತಿ ಅವರಿಗೆ ವಹಿಸಲಾಯಿತು.