ಕುಷ್ಟಗಿ(ಕೊಪ್ಪಳ): ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಯಾವಾಗ ಆರಂಭಗೊಳ್ಳುತ್ತವೆಯೋ ಗೊತ್ತಿಲ್ಲ. ವಿದ್ಯಾರ್ಥಿಗಳ ಪಾಠಗಳ ಒತ್ತಡ ಕಡಿಮೆ ಮಾಡಿ ಪ್ರಸಕ್ತ ವರ್ಷದಲ್ಲಿಯೇ ಪರೀಕ್ಷೆ ಅಯೋಜಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಹಂತದಲ್ಲಿ ಶಿಕ್ಷಕರು ಹೆಚ್ಚು ಕೆಲಸ ಮಾಡಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಇಲ್ಲಿನ ಬಸವ ಭವನದಲ್ಲಿ ತಾಲೂಕಾಡಳಿತ, ತಾ.ಪಂ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು 20 ಪಾಠಗಳಿದ್ದರೆ, 6 ತಿಂಗಳಿನಲ್ಲಿ 10 ಪಾಠಕ್ಕೆ ಸೀಮಿತಗೊಳಿಸಿ ಪಾಠ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಕರು, ಸಮರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸಿ, ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ಕಡಿಮೆಯಾಗದಂತೆ ನಿಗಾವಹಿಸಬೇಕು ಎಂದರು.
ಕೊರೊನಾ ಮಹಾಮಾರಿಗೆ ಔಷಧಿಯೇ ಇಲ್ಲ ಅದರ ಔಷಧಿಯನ್ನು ಇನ್ನೂ ಕಂಡು ಹಿಡಿಯಲು ಸಾದ್ಯವಾಗಿಲ್ಲ. ಕಂಡು ಹಿಡಿದರೂ ಪರಿಣಾಮಕಾರಿಯಾಗಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರದಿಂದ ಕೊರೊನಾ ನಿಗ್ರಹಿಸಬಹುದಾಗಿದೆ ಎಂದರು.