ಕೊಪ್ಪಳ: ಮುಂಬೈನ ಹೋಟೆಲ್ನಲ್ಲಿ ತಂಗಿರುವ ಎಲ್ಲಾ ಶಾಸಕರನ್ನು ಚುನಾವಣಾ ಕಾಯ್ದೆ ಪ್ರಕಾರ ವಜಾ ಮಾಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು.
ತಾಲೂಕಿನ ಹುಲಗಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಶಾಸಕರಾಗಲಿ ಅವರಿಗೆ ಜವಾಬ್ದಾರಿ ಇರುತ್ತದೆ. ಒಂದು ಪಕ್ಷದಿಂದ ಶಾಸಕರಾದ ಮೇಲೆ ಅದೇ ಪಕ್ಷದಲ್ಲಿರುವುದು ಅವರ ಹೊಣೆ. ಒಂದು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಬಳಿಕ 5 ವರ್ಷ ಕಡ್ಡಾಯವಾಗಿ ಆ ಪಕ್ಷದಲ್ಲಿ ಇರಬೇಕು. ಇಲ್ಲವಾದಲ್ಲಿ ಜೀವನ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಕಾನೂನು ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಈ ರೀತಿಯ ಕಠಿಣ ತಿದ್ದುಪಡಿ ತರದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇಬ್ಬರು ಸಚಿವರು ಮೂರು ತಿಂಗಳಲ್ಲಿ ಆ ಕಡೆಯಿಂದ ಈಕಡೆ, ಈ ಕಡೆಯಿಂದ ಆ ಕಡೆ ಜಿಗಿದರು. ಅವರಿಗೆ ಮಾನ ಮರ್ಯಾದೆ ಇದೆಯೇ? ಎಂದು ಪ್ರಶ್ನಿಸಿದರು. ಮುಂಬೈನಲ್ಲಿ ಹೋಟೆಲ್ನಲ್ಲಿ ಶಾಸಕರನ್ನು ಕೂಡಿ ಹಾಕಿದ್ದಾರೆ. ಶಾಸಕರನ್ನು ಕೂಡಿ ಹಾಕಿರುವುದರಿಂದ ಪ್ರಜಾತಂತ್ರ ವ್ಯವಸ್ಥೆ ಹಾಳಾಗಿದ್ದು ಸಂವಿಧಾನಕ್ಕೆ ಅಪಚಾರವಾಗಿದೆ. ಇದು ರಾಷ್ಟ್ರಪತಿಗಳಿಗೆ, ಚುನಾವಣಾ ಆಯೋಗಕ್ಕೆ ಹಾಗೂ ಪ್ರಧಾನಮಂತ್ರಿ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ನಾವೆಲ್ಲ ಪಕ್ಷದಲ್ಲಿದ್ದೇವೆ. ಆದರೆ ರಾಜೀನಾಮೆ ಕೊಡ್ತಾ ಇದ್ದೀವಿ ಅಂತಾ ಹೇಳ್ತಾ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದರು.