ಗಂಗಾವತಿ: ಇಲ್ಲಿನ ನಗರಸಭೆ ಜನರಿಗೆ ಗಾಂಧಿ ಜಯಂತಿ ಅಂಗವಾಗಿ ವಿಭಿನ್ನ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಇದು ಅಂತಿಂಥ ಸ್ಪರ್ಧೆಯಲ್ಲ, ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಆರಿಸುವ ಸ್ಪರ್ಧೆ ಏರ್ಪಡಿಸಿತ್ತು.
ಸಾಮಾಜಿಕ ಕಳಕಳಿ, ಪರಿಸರ ಸಂರಕ್ಷಣೆಯ ಹೊಣೆ ಹೊತ್ತ ಯುವಕರು ನಾಲ್ಕಾರು ತಂಡಗಳಲ್ಲಿ ಬೆಳ್ಳಂಬೆಳಗ್ಗೆ ಪ್ಲಾಸ್ಟಿಕ್ ಆರಿಸಲು ಮುಗಿಬಿದ್ದಿದ್ದರು. ವಿಚಿತ್ರ ಎಂದರೆ ಒಂದೇ ದಿನಕ್ಕೆ ನಾಲ್ಕು ತಂಡಗಳು ಬರೋಬ್ಬರಿ ಒಂದೂವರೆ ಟನ್ ಪ್ಲಾಸ್ಟಿಕ್ ಆರಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಫಿ ಮತ್ತು ವಂಕಟೇಶ ನೇತೃತ್ವದಲ್ಲಿನ ತಂಡ ಬರೋಬ್ಬರಿ 595 ಕೆ.ಜಿ. ಪ್ಲಾಸ್ಟಿಕ್ ಆಯ್ದು ಮೊದಲ ಸ್ಥಾನದ ಜೊತೆಗೆ 15 ಸಾವಿರ ಬಹುಮಾನ ಪಡೆಯಿತು. ನಮ್ಮೂರು ನಮ್ಮ ಹಳ್ಳಿ ತಂಡ 565 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಿ ಎರಡನೇ ಸ್ಥಾನದ ಜೊತೆ 10 ಸಾವಿರ ರೂ. ನಗದು ಪುರಸ್ಕಾರ ಸ್ವೀಕರಿಸಿತು.
ಲತೀಫ್ ಮತ್ತು ತಂಡದ ಸದಸ್ಯರು 435 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಆರಿಸುವ ಮೂಲಕ ಮೂರನೇ ಸ್ಥಾನದ ಜೊತೆಗೆ ಐದು ಸಾವಿರ ನಗದು ಬಹುಮಾನಕ್ಕೆ ಪಡೆದರು. ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ್ ವಿಜೇತ ತಂಡಕ್ಕೆ ನಗದು ಪುರಸ್ಕಾರ ವಿತರಿಸಲಿದ್ದಾರೆ ಎಂದು ಪೌರಾಯುಕ್ತ ದೇವಾನಂದ ದೊಡ್ಮನಿ ತಿಳಿಸಿದರು.