ಕೊಪ್ಪಳ : ಕೊರೊನಾ ಸೋಂಕು ಇಳಿಮುಖವಾದ ಹಿನ್ನೆಲೆ ದೇವಸ್ಥಾನಗಳು ಓಪನ್ ಆದ ಬಳಿಕ ಮೊದಲ ಶನಿವಾರವಾದ ಇಂದು ಅಂಜನಾದ್ರಿಗೆ ಹನುಮನ ಭಕ್ತರು ಹರಿದು ಬಂದಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಪರ್ವತಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಹನುಮ ಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ಆಂಜನೇಯಸ್ವಾಮಿಯ ದರ್ಶನ ಪಡೆದರು.
ಸುಮಾರು 564 ಮೆಟ್ಟಿಲುಗಳನ್ನೇರಿ ಭಕ್ತರು ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯನ ದರ್ಶನ ಪಡೆದರು. ಕೊರೊನಾ ಭೀತಿಯಿಂದಾಗಿ ಅಂಜನಾದ್ರಿ ದೇವಸ್ಥಾನವೂ ಬಂದ್ ಮಾಡಲಾಗಿತ್ತು.
ಸರ್ಕಾರ ಕಳೆದ ಜೂನ್ 5ರಿಂದ ದೇವಸ್ಥಾನ ಓಪನ್ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ದೇವಸ್ಥಾನಗಳು ಈಗ ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಅದರಂತೆ ದೇವಸ್ಥಾನ ಓಪನ್ ಆದ ಮೊದಲ ಶನಿವಾರವಾದ ಇಂದು ಅಂಜನಾದ್ರಿಗೆ ಹನುಮನ ಭಕ್ತರ ದಂಡೇ ಬಂದಿತ್ತು.