ಕೊಪ್ಪಳ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಹಾಗೂ ವಿಶೇಷ ವಿಮಾನವನ್ನು ಕೊಪ್ಪಳದ ಖಾಸಗಿ ಏರ್ಪೋರ್ಟ್ನಲ್ಲಿ ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದರು.
ತಾಲೂಕಿನ ಬಸಾಪೂರ ಬಳಿ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಯಿತು. ರಾಯಚೂರು ಜಿಲ್ಲೆಗೆ ದೇವೇಗೌಡ ಅವರು ತೆರಳುತ್ತಿದ್ದ ಹಿನ್ನೆಲೆಯಲ್ಲಿ ಬಸಾಪೂರದ ಏರ್ಪೋರ್ಟ್ ನಲ್ಲಿ ತಾಂತ್ರಿಕ ನಿಲುಗಡೆ ಇತ್ತು. ಈ ಸಂದರ್ಭದಲ್ಲಿ ದೇವೇಗೌಡ ಆಗಮಿಸಿದ ವಿಶೇಷ ವಿಮಾನವನ್ನು ಚುನಾವಣೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಿದರು. ಸಿಬ್ಬಂದಿಯ ತಪಾಸಣೆಗೆ ದೇವೇಗೌಡರ ಆಪ್ತಸಹಾಯಕ ಹಾಗೂ ವಿಮಾನ ಸಿಬ್ಬಂದಿ ಸಹಕರಿಸಿದರು.
ಕಣ್ಣೀರು ಹಾಕಿದ್ದು ನಮ್ಮ ಕುಟುಂಬ: ರಾಜ್ಯದ ಸಮಸ್ಯೆ ಬಂದಾಗ ಹಾಗೂ ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದ್ದು ದೇವೇಗೌಡರ ಫ್ಯಾಮಿಲಿ. 12 ಜನ ಎಂಪಿಗಳು ಹಾಗೂ 4 ಜನ ಕಾಂಗ್ರೆಸ್ ಮಿನಿಸ್ಟರ್ ಇದ್ದರೂ ಕಣ್ಣೀರು ಹಾಕಿಲ್ಲ ಎಂದು ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಹೆಚ್. ಡಿ. ದೇವೇಗೌಡ, ಕಾವೇರಿ ನೀರಿಗಾಗಿ ಹಾಗೂ ರಾಜ್ಯದ ಸಮಸ್ಯೆ ಬಂದಾಗ ಬಿಜೆಪಿಯವರು ಕಣ್ಣೀರು ಹಾಕಿದ್ರಾ? ಕಾಂಗ್ರೆಸ್ನವರು ಕಣ್ಣೀರು ಹಾಕಿದ್ರಾ? ರಾಜ್ಯದ ಸಮಸ್ಯೆ ಬಂದಾಗ, ಕಾವೇರಿ ನೀರಿಗಾಗಿ ದೇವೇಗೌಡರ ಕುಟುಂಬ ಭಾವನಾತ್ಮಕವಾಗಿ ಕಣ್ಣೀರು ಹಾಕುತ್ತೆ ಎಂದರು.
ಇನ್ನು ನಾನು ಮೋದಿಗಿಂತ ಚೆನ್ನಾಗಿ ಮಾತನಾಡಬಲ್ಲೆ. ಆದರೆ, ನನಗೆ ಹಿಂದಿ ಬರೋದಿಲ್ಲ. ಒಬ್ಬ ಪ್ರಧಾನಿಯಾಗಿ ಮೋದಿ ಮಾತನಾಡಬೇಕಾದರೆ ಮಾತಿನ ಮೇಲೆ ಹಿಡಿತವಿರಬೇಕು. ಮೈತ್ರಿಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೆ. ಇನ್ನು ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರಚಾರ ಮಾಡ್ತೇವೆ ಎಂದರು. ಈಗಾಗಲೇ ರಾಜ್ಯದ ಮೊದಲ ಹಂತದ ಚುನಾವಣೆ ಮುಗಿದಿದೆ. ಮತಪೆಟ್ಟಿಗೆ ಸೀಲ್ ಆಗಿದೆ. ಅಭ್ಯರ್ಥಿಯಾಗಿ ನಾವು ಗೆಲ್ಲುತ್ತೇವೆ ಎಂದು ಹೇಳಬಹುದು. ಆದರೆ, ಮತದಾರರ ತೀರ್ಪು ಗೌರವಿಸುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.