ಗಂಗಾವತಿ: ಕಳೆದ ಹದಿನೆಂಟು ವರ್ಷದಿಂದ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಸಿಬ್ಬಂದಿಯೊಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೃತರನ್ನು ಡಿ ದರ್ಜೆ ನೌಕರ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಇವರು ಆಸ್ಪತ್ರೆಯ ಗಾಯಾಳುಗಳ ಆರೈಕೆ ವಿಭಾಗದಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸಣ್ಣ-ಪುಟ್ಟ ಗಾಯಾಳುಗಳು ಯಾರೇ ಬಂದರೂ ಮೊದಲು ರೆಹಮಾನ್ ಬಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ವೈದ್ಯರ ಬಳಿ ಚಿಕಿತ್ಸೆಗೆ ತೆರಳುತ್ತಿದ್ದರು.
ಆದರೆ, ರೆಹಮಾನ್ಗೆ ಕಳೆದ ಜುಲೈ 29ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಕಳೆದ 23 ದಿನಗಳಿಂದ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವುಡಿ ಹಾಗೂ ಸಿಬ್ಬಂದಿ ಮೃತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.