ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲು ಹೇಳಿಕೆ ಕೊಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಲವ್ ಜಿಹಾದ್ ಕಾಯ್ದೆ ಮೂರ್ಖತನದ್ದು ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಲು ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಧರ್ಮದ ಮೇಲಿನ ಅನ್ಯಾಯ ನಿಲ್ಲಿಸಬೇಕು ಎಂಬುದು ನಮ್ಮ ಕಲ್ಪನೆ ಎಂದು ತಾವು ತರುತ್ತಿರುವ ಲವ್ ಜಿಹಾದ್ ಕಾನೂನುನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಕುರುಬ ಸಮುದಾಯ ಒಡೆಯಲು RSS ಹುನ್ನಾರ, ಅದಕ್ಕಾಗಿ ಎಸ್‌ಟಿ ಹೋರಾಟ - ಸಿದ್ದರಾಮಯ್ಯ
ಹೆಚ್. ವಿಶ್ವನಾಥ್ ಅವರ ವಿರುದ್ಧ ಹೈಕೋರ್ಟ್ನಲ್ಲಿ ತೀರ್ಪು ಬಂದಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಬರುವುದಿಲ್ಲ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ, ಸುಪ್ರಿಂ ಕೋರ್ಟ್ನಲ್ಲಿ ನ್ಯಾಯ ಪಡೆಯಲು ವಿಶ್ವನಾಥ್ ಪರವಾಗಿ ನಾವು ಪ್ರಯತ್ನ ಮಾಡುತ್ತೇವೆ. ಸಿಪಿ ಯೋಗೀಶ್ವರ್ ಪರವಾಗಿ ರಮೇಶ್ ಜಾರಕೊಹೊಳಿ ಲಾಭಿ ಮಾಡಿರುವುದರಲ್ಲಿ ತಪ್ಪಿಲ್ಲ. ಯಾಕಂದ್ರೆ ವೈಯಕ್ತಿಕ ಗೆಳೆತನದ ವಿಚಾರದಲ್ಲಿ ಇಂತಹ ಬೆಳವಣಿಗೆಗಳು ಆಗುತ್ತವೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದು ಸಹಜ. ಆದರೆ, ತೀರ್ಮಾನ ಮಾಡೋದು ಸಿಎಂ ಹಾಗೂ ಪಕ್ಷದ ಹೈಕಮಾಂಡ್ ಎಂದರು.
ಸಂವಿಧಾನದ 371ನೇ ಜೆ ಕಲಂ ಅಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳು ಹಾಗೂ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುವುದಾಗಲಿ, ತೆಗೆದು ಹಾಕುವುದಕ್ಕಾಗಲಿ ಬರುವುದಿಲ್ಲ. ಹಾಗೆ ಮಾಡಬೇಕು ಎಂದರೆ ಸಂವಿಧಾನ ತಿದ್ದುಪಡಿ ಮಾಡಬೇಕು. ಮೊಳಕಾಲ್ಮೂರು ತಾಲೂಕನ್ನು 371ಜೆ ವ್ಯಾಪ್ತಿಗೆ ಸೇರಿಸುವ ಯಾವುದೇ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.