ಕೊಪ್ಪಳ : ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಪಟ್ಟಿ ಕಳುಹಿಸಲಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಹೆಸರು ಅಂತಿಮವಲ್ಲ. ಎಂಟಿಬಿ ನಾಗರಾಜ, ವಿಶ್ವನಾಥ ಹಾಗೂ ಆರ್.ಶಂಕರ್ ಅವರಿಗೆ ಟಿಕೆಟ್ ಕೇಳುವ ಹಕ್ಕಿದೆ. ಪಕ್ಷದ ಮೇಲೂ ಜವಾಬ್ದಾರಿ ಇದೆ. ಹೀಗಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಶಾಸಕ ಉಮೇಶ ಕತ್ತಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಪಕ್ಷದ ಶಿಸ್ತನ್ನು ಪಾಲಿಸುತ್ತಾರೆ ಹಾಗೂ ಪಕ್ಷದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ಸಂವಿಧಾನದ ಆಶಯದಂತೆ ಎಸ್ಸಿ, ಎಸ್ಟಿ ಗೆ ಮೀಸಲಾತಿ ಕಲ್ಪಿಸಲಾಗಿದೆ. ಇದೊಂದು ಕಾನೂನಿನ ಚೌಕಟ್ಟಿನಲ್ಲಿ ನಡೆಯುವಂತಹ ಪ್ರಕ್ರಿಯೆ. ಯಾವುದೇ ಜಾತಿ, ಜನಾಂಗವನ್ನು ಎಸ್ಸಿ, ಎಸ್ಟಿಗೆ ಸೇರಿಸುವ ಹಾಗೂ ತೆಗೆದು ಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಹೇಳಿದರು.