ಗಂಗಾವತಿ(ಕೊಪ್ಪಳ): ರಾಯಚೂರು ಜಿಲ್ಲೆಯ ಗಿಲ್ಲೇಸಗೂರು ಕ್ಯಾಂಪಿನಲ್ಲಿ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಗಲ್ಲಿಗೇರಿಸುವಂತೆ ಒತ್ತಾಯಿಸಿ, ದಲಿತ ಸಂಘಟನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆಯ ತಾಲೂಕು ಘಟಕದ ಅಧ್ಯಕ್ಷ ಅಜಯಕುಮಾರ್ ಚಲುವಾದಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಪ್ರಕರಣ ನಡೆದು ಐದು ದಿನ ಕಳೆದಿದೆ. ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಇದುವರೆಗೂ ಆರೋಪಿಗಳಿಗೆ ಶಿಕ್ಷೆ ಕೊಟ್ಟಿಲ್ಲ. ವಿಚಾರಣೆ, ತನಿಖೆ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ ಎಂದರು.
ನಮ್ಮ ಕಾನೂನಿನಲ್ಲಿರುವ ಲೋಪ ಮತ್ತು ವಿಳಂಬ ನೀತಿಯಿಂದಲೇ ಇಂದು ಇಂತಹ ಪ್ರಕರಣಗಳು ಅತಿ ಹೆಚ್ಚು ನಡೆಯುತ್ತಿವೆ. ಪ್ರಕರಣ ನಡೆದಾಗ ತಪ್ಪಿತಸ್ಥರು ಎಂದು ಗೊತ್ತಾದ ತಕ್ಷಣ ಅವರನ್ನು ಗಲ್ಲಿಗೇರಿಸುವ ಕೆಲಸವಾದರೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಕಡಿಮೆಯಾಗಲಿದೆ.
ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ತಕ್ಷಣ 25 ಲಕ್ಷ ಮೊತ್ತದ ಪರಿಹಾರ ನೀಡಬೇಕು ಮತ್ತು ಒಬ್ಬರಿಗೆ ಉದ್ಯೋಗ ನೀಡಬೇಕು. ಈ ಬಗ್ಗೆ ಸರ್ಕಾರ ತಕ್ಷಣ ಸ್ಪಂದಿಸದೇ ಹೋದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಮರಿಸ್ವಾಮಿ ಬರಗೂರು ಮಾತನಾಡಿ, ರಾಜ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯಲು ಮುಖ್ಯ ಕಾರಣ ಎಂದರೆ ಆಡಳಿತ ನಡೆಸುವ ಚುನಾಯಿತರು ಮತ್ತು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿರುವುದೇ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ: ಅಪ್ರಾಪ್ತೆ ರೇಪ್ ಮಾಡಿ, ಕೊಂದು ಕಬೋರ್ಡ್ನಲ್ಲಿ ಶವ ಬಚ್ಚಿಟ್ಟಿದ್ದ ಪಾತಕಿ!
ಸ್ಕೂಟಿ ಕಲಿಸುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ: ಜೂ.19ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಕಾಮುಕ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ನಡೆದಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಸ್ಕೂಟಿ ಕಲಿಸುವ ನೆಪದಲ್ಲಿ ಕರೆದೊಯ್ದು 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿ ಸಪನ್ ಮಂಡಲ್ (52) ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
4ನೇ ತರಗತಿ ಓದುತ್ತಿರುವ ಬಾಲಕಿ ಎಂದಿನಂತೆ ಮನೆಯಲ್ಲಿ ಊಟ ಮಾಡಿ ಶಾಲೆಗೆ ಹೋಗಲು ಸಿದ್ಧವಾಗಿ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಸಪನ್ ಮಂಡಲ್ ಎಂಬಾತ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ತನ್ನ ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿ ಇಂತಹ ಕೃತ್ಯ ಎಸಗಿದ್ದ ಎಂದು ದೂರು ದಾಖಲಾಗಿತ್ತು.
ಇದನ್ನೂ ಓದಿ: Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!