ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಇಂದಿನಿಂದ ಸಿಟಿ ಸ್ಕ್ಯಾನ್ ಆರಂಭ ಮಾಡುವುದಾಗಿ ಕಿಮ್ಸ್ ನಿರ್ದೇಶಕ ಡಾ. ವೈಜನಾಥ ಇಟಗಿ ತಿಳಿಸಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೆಲವರಲ್ಲಿ ರೋಗಲಕ್ಷಣಗಳಿದ್ದರೂ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬರುತ್ತಿದೆ. ಹೀಗಾಗಿ ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ಹೇಳಿದರು.
ಆದರೆ, ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಮಶಿನ್ ಬಂದ್ ಆಗಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾಲ್ಕು ವರ್ಷದಿಂದ ಆರಂಭವಾಗಿಲ್ಲ. ತಾಂತ್ರಿಕ ತೊಂದರೆಯಿಂದ ಅದು ಬಂದ್ ಆಗಿತ್ತು. ಸಿಂಗಾಪುರದಿಂದ ಸ್ಪೇರ್ ಬರಬೇಕಿತ್ತು. ಸತತ ಪ್ರಯತ್ನದಿಂದ ಈಗ ಅದನ್ನು ಸರಿಪಡಿಸಲಾಗಿದೆ. ಈ ಸಿಸ್ಟಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಸ್ಪತ್ರೆಗೆ ಬಂದಿದೆ. ಸರ್ಕಾರದ ನಿರ್ದೇಶನದಂತೆ ದರವಿರುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅಥಣಿಯಲ್ಲಿ ಕೊರೊನಾ ಅಬ್ಬರ: ಗಡಿ ರಸ್ತೆ ಬಂದ್ ಮಾಡುವಂತೆ ಎಸ್ಪಿ ಸೂಚನೆ
ಬೆಳಗ್ಗೆಯಿಂದಲೇ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಆರಂಭವಾಗಲಿದೆ. ಆಸ್ಪತ್ರೆಯ ಆವರಣದಲ್ಲಿಯೇ ಆಕ್ಸಿಜನ್ ಸಂಗ್ರಹಣಾ ಟ್ಯಾಂಕ್ ಮಾಡಿಕೊಳ್ಳಲಾಗಿದೆ. ನಮ್ಮದೊಂದು ತಂಡವಿದೆ. ಅದನ್ನು ಅವರು ಮಾನಿಟರ್ ಮಾಡುತ್ತಾರೆ. ಹೀಗಾಗಿ, ನಮಗೆ ಆಕ್ಸಿಜನ್ ತೊಂದರೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.