ಕೊಪ್ಪಳ: ಆಶಾ ಕಾರ್ಯಕರ್ತೆಯರು ಮತ್ತು ವೈದ್ಯರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಹಲ್ಲೆ ಮಾಡುವುದು ಸಹಿಸಲಾರದ ಅಪರಾಧ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು, ಅವರ ಮೇಲೆ ಹಲ್ಲೆ ನಡೆಸುವವರು ಸಮಾಜ ದ್ರೋಹಿ, ದೇಶ ದ್ರೋಹಿಗಳು. ಅಂತಹವರನ್ನು ಬಂಧಿಸಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ನಂಜನಗೂಡು ಜ್ಯುಬಿಲಿ ಫ್ಯಾಕ್ಟರಿ ದುರಂತಗಳಿಂದ ರಾಜ್ಯದಲ್ಲಿ ಕೊರೊನಾ ಈ ಮಟ್ಟಕ್ಕೆ ಬರಲು ಕಾರಣವಾಗಿದೆ. ಏಪ್ರಿಲ್ 9ರಂದು 6, ಏಪ್ರಿಲ್ 8ರಂದು 12 ಪ್ರಕರಣಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಐದು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಕೊರೊನಾ ನಿಯಂತ್ರಿಸುವ ಔಷಧಿ ಇಲ್ಲ. ಹೀಗಾಗಿ, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಹಾಗಂತ ನಾವು ಮರೆಯುವುದು ಬೇಡ ಎಂದರು.
ರೈತರ ಕೃಷಿ ಚಟುವಟಿಕೆಗಳಿಗೆ ಅವರ ಉತ್ಪನ್ನಗಳ ಸಾಗಾಟ ಹಾಗೂ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನ ಇದೆ. ಯಾವುದೇ ಕಾರಣಕ್ಕೂ ರೈತರಿಗೆ ನಿಬಂಧನೆ ವಿಧಿಸಬಾರದು ಎಂದು ಸ್ಪಷ್ಟಪಡಿಸಿದರು.
ಈಗ ಬಿತ್ತನೆ ಪ್ರಾರಂಭವಾಗುತ್ತಿದೆ. ಸರ್ಕಾರದಿಂದ ಬೀಜ-ಗೊಬ್ಬರ, ಕ್ರಿಮಿನಾಶಕ ವಿತರಣೆ ರೈತ ಸಂಪರ್ಕ ಕೇಂದ್ರದ ಮೂಲಕ ಆಗಲಿದೆ. ಕಳಪೆ ಬೀಜ ನೀಡುವುದು ರೈತರನ್ನು ಕೊಲೆ ಮಾಡಿದಂತೆ. ರೈತರಿಗೆ ಕಳಪೆ ಬೀಜ ವಿತರಿಸಿದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಚ್ಚರಿಸಿದರು.