ಕೊಪ್ಪಳ : ರಾಜ್ಯಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದ್ರೂ ಕೊಪ್ಪಳದಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಜನರು ನಿಯಮ ಉಲ್ಲಂಘಿಸಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ನಗರದ ಎಸ್.ಜಿ.ಗಂಜ್‌ನಿಂದ ಬೆಳವನಾಳ ಗ್ರಾಮದ ಬಳಿ ಸ್ಥಳಾಂತರವಾಗಿರುವ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳದೆ ಜನರು ತಿರುಗಾಡುತ್ತಿದ್ದಾರೆ.
ಅನಗತ್ಯ ವಾಹನಗಳ ಓಡಾಟ ನಡೆಸದಂತೆ ಸೂಚನೆ ನೀಡಲಾಗಿದ್ದರೂ ಸಹ ನಗರದಲ್ಲಿ ಬೈಕ್, ಆಟೋಗಳು ಸೇರಿ ವಿವಿಧ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಇಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ ನಿಯಮ ಪಾಲನೆಯ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಂಗಾವತಿಯಲ್ಲಿ ಕಟ್ಟುನಿಟ್ಟಿನ ಕ್ರಮ : ಗಂಗಾವತಿಯಲ್ಲಿ ಬೆಳಗ್ಗೆಯಿಂದಲೇ ಫೀಲ್ಡಿಗಿಳಿದಿರುವ ಪೊಲೀಸರು, ಅನಗತ್ಯವಾಗಿ ಸಂಚರಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ಗಾಂಧಿವೃತ್ತದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಯಾವ ಅಧಿಕಾರಿ ನೇತೃತ್ವದ ತಂಡ ಎಲ್ಲೆಲ್ಲಿ ಕಾರ್ಯಾಚರಣೆ ಮಾಡಬೇಕು ಎಂದು ಸ್ಥಳ ನಿಗಧಿ ಮಾಡಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ನಾಗರಾಜ್, ಪೌರಾಯುಕ್ತ ಅರವಿಂದ್ ಜಮಖಂಡಿ ಮಾತನಾಡಿ, ಕಂದಾಯ ಹಾಗೂ ನಗರಸಭೆ ಸಿಬ್ಬಂದಿಯನ್ನೂ ಜನರ ಓಡಾಟ ನಿಯಂತ್ರಣಕ್ಕೆ ನಿಯೋಜಿಸುವುದಾಗಿ ಹೇಳಿದರು.
ಓದಿ: ಶಾಕಿಂಗ್ ಸುದ್ದಿ.. ಇತರೆ ಕಾಯಿಲೆಗಳಿಲ್ಲದಿದ್ದರೂ ಸಹ ಕೊರೊನಾ ಸೋಂಕಿಗೆ ಬಲಿಯಾದವರೇ ಹೆಚ್ಚು!