ಕೊಪ್ಪಳ: ಕೊರೊನಾ ಸೋಂಕಿನ ಮೂರನೇ ಭೀತಿ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಸರಳ ಗಣೇಶೋತ್ಸವ ಆಚರಣೆಗೆ ಸೂಚನೆ ನೀಡಿದೆ. ಆದರೆ ಜಿಲ್ಲೆಯ ಕನಕಗಿರಿ ಪಟ್ಟಣ ಸೇರಿದಂತೆ ಅನೇಕ ಕಡೆ ಗಣೇಶಮೂರ್ತಿ ನಿಮಜ್ಜನ ವೇಳೆ ಆದೇಶವನ್ನು ಧಿಕ್ಕರಿಸಿರುವುದು ಕಂಡು ಬಂದಿದೆ.
ಗಣಪನ ಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ನೂರಾರು ಜನರು ಸೇರಿದ್ದರು. ನಿಮಜ್ಜನ ವೇಳೆಯಲ್ಲಿ ಡಿಜೆ ಬಳಕೆ ನಿಷೇಧವಿದ್ದರೂ ಡಿಜೆ ಹಾಕಿ ಯುವಕರು ಕುಣಿದು ಕುಪ್ಪಳಿಸಿದರು. ಪೊಲೀಸರ ಮುಂದೆಯೇ ಡಿಜೆ ಹಾಕಿ ಸಂಭ್ರಮದಿಂದ ಜನ್ರು ಸ್ಟೆಪ್ ಹಾಕಿದ್ರೂ ಯಾರೂ ಕೇಳಲಿಲ್ಲ.
ಎರಡು ಸಾವಿರಕ್ಕೂ ಅಧಿಕ ಜನರಿಂದ ಮೆರವಣಿಗೆ:
ಗಂಗಾವತಿಯಲ್ಲಿ ಕೂಡ ಗಣೇಶನ ಮೆರವಣಿಗೆ ಕೊರೊನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ. ಎರಡು ಸಾವಿರಕ್ಕೂ ಅಧಿಕ ಜನರಿಂದ ಮೆರವಣಿಗೆ, ಕಿವಿಗಡಚ್ಚಿಕ್ಕುವ ಡಿಜೆ, ಯುವಕರ ಡ್ಯಾನ್ಸ್, ಮೋಜು ಎಲ್ಲವನ್ನೂ ನಡೆಸಿ ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಗಜಾನನ ಸಮಿತಿ ಗಣೇಶೋತ್ಸವ ಮಾಡಿದೆ.
ಗಣೇಶ ಹಬ್ಬದ ಅಂಗವಾಗಿ ಕನಕಗಿರಿ ಪಟ್ಟಣದ ಅಗಸಿ ಬಳಿ ಸ್ಥಾಪಿಸಿದ್ದ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಅದ್ಧೂರಿ ಮೆರವಣಿಗೆ ಹಮ್ಮಿಕೊಂಡಿದ್ದರು. ಅಲ್ಲದೇ ಡಿಜೆ ಮ್ಯೂಸಿಕ್ ಇಡೀ ಪಟ್ಟಣದಾದ್ಯಂತ ಕೇಳಿಸುವಷ್ಟು ಸದ್ದು ಮಾಡಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಹಬ್ಬದ ನೆಪದಲ್ಲಿ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವಂತಹ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಜಾರಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶ ಸ್ವತಃ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಉಲ್ಲಂಘನೆಯಾಗುತ್ತಿದ್ದರೂ ಯಾರೊಬ್ಬರೂ ತಡೆಯುವ ಗೋಜಿಗೆ ಹೋಗಲಿಲ್ಲ. ಅಲ್ಲದೇ ಪೊಲೀಸ್ ಇಲಾಖೆಯ ಅಧಿಕಾರಿಗಳು ಅದ್ಧೂರಿ ಮೆರವಣಿಗೆಗೆ ಭದ್ರತೆ ಒದಗಿಸಿದ್ದು ಬಿಟ್ಟರೆ ಮೆರವಣಿಗೆ ನಿಯಂತ್ರಿಸುವ ಯತ್ನಕ್ಕೆ ಕೈ ಹಾಕಲಿಲ್ಲ.