ಕೊಪ್ಪಳ: ಕೊರೊನಾ ನಿಯಂತ್ರಣಕ್ಕಾಗಿ ಎರಡನೇ ಹಂತದ ಲಾಕ್ಡೌನ್ ಮುಂದುವರೆದಿದೆ. ಜಿಲ್ಲೆಯಲ್ಲಿ ದಿನಗೂಲಿ ಮತ್ತು ಹೊರ ರಾಜ್ಯಗಳಿಂದ ಬಂದು ಪಾನಿಪುರಿ, ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದವರ ಬದುಕು ಕಷ್ಟವಾಗತೊಡಗಿದೆ.
ಜಿಲ್ಲೆಯಲ್ಲಿ ಹಲವು ಮಂದಿ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಆಶ್ರಯ ಕಲ್ಪಿಸಿ ಆಹಾರ ಧಾನ್ಯ ನೀಡಿ ನೆರವಾಗಿದೆ. ಆದರೆ ದಿನವೂ ಗಲ್ಲಿ ಗಲ್ಲಿ ಸುತ್ತಾಡಿ ಚಹಾ ಮಾರಾಟ ಮಾಡಿ ಅನೇಕರು ಸಂಪಾದನೆ ಮಾಡುತ್ತಿದ್ದರು. ಲಾಕ್ಡೌನ್ ಹಿನ್ನೆಲೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಇತ್ತ ದುಡಿಮೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ರೇಷನ್ ನೀಡಿದೆಯಾದರೂ ಮನೆಯ ಉಳಿದ ಖರ್ಚಿಗೆ ಹಣವಿಲ್ಲದೆ ಮುಂದಿನ ಬದುಕು ಹೇಗಪ್ಪಾ ಎಂದು ಚಿಂತಿಸತೊಡಗಿದ್ದಾರೆ. ಇನ್ನು ದಿನಗೂಲಿ ಕಾರ್ಮಿಕರ ಸ್ಥಿತಿಯೂ ಇದೇ ಆಗಿದೆ. ಇನ್ನು ಉತ್ತರ ಪ್ರದೇಶ, ರಾಜಸ್ಥಾನದಿಂದ ಬಂದು ಬಂಡಿಗಳಲ್ಲಿ ಪಾನಿಪೂರಿ ಮಾರಾಟ ಮಾಡುವವರು, ಐಸ್ ಕ್ರಿಂ, ಜ್ಯೂಸ್, ಪಾವ್ ಬಾಜಿ ಮಾರಾಟ ಮಾಡುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾಗ್ಯನಗರ ಸೇರಿದಂತೆ ನಗರದ ಇತರೆಡೆ ಪಾನಿಪೂರಿ ಮಾರಾಟ ಮಾಡಿ ಬದುಕುತ್ತಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳು ಈಗ ವಾಸವಿರುವ ಮನೆಯ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದಾರೆ. ದುಡಿಮೆಯೂ ಇಲ್ಲದೆ ತುಂಬಾ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.