ಕೊಪ್ಪಳ: ಕೊರೊನಾ ವಿರುದ್ಧದ ಹೋರಾಟಕ್ಕೆ ಸಿಎಂ ಪರಿಹಾರ ನಿಧಿಗೆ ಜಿಲ್ಲೆಯ ಸರ್ಕಾರಿ ನೌಕರರೊಬ್ಬರು ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಗುಂಗಾಡಿ ವೈಯಕ್ತಿಕವಾಗಿ ಸಿಎಂ ಪರಿಹಾರ ನಿಧಿಗೆ ಇಂದು 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ದೇಶ, ರಾಜ್ಯ ಈಗ ಸಂಕಷ್ಟದಲ್ಲಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು, ನೌಕರರು, ನಿವೃತ್ತ ನೌಕರರು, ವಿವಿಧ ಮಠ ಮಾನ್ಯಗಳು, ವ್ಯಾಪಾರಸ್ಥರು ಮತ್ತು ಸಂಘ ಸಂಸ್ಥೆಗಳು ಸಹ ದೇಣಿಗೆ ನೀಡುವ ಮೂಲಕ ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಶರಣಪ್ಪ ಗುಂಗಾಡಿ ಮನವಿ ಮಾಡಿದ್ದಾರೆ.