ಕುಷ್ಟಗಿ (ಕೊಪ್ಪಳ): ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ತಿಳಿಸಿದರು.
ಕುಷ್ಟಗಿಯಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, 106 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನಗಳು ಇಲ್ಲದಿರುವುದು ದುರ್ದೈವದ ಸಂಗತಿ. ರಾಜ್ಯಾಧ್ಯಕ್ಷನಾದ ನಂತರ ಕನ್ನಡ ಭವನ ನಿರ್ಮಿಸುವುದೇ ನನ್ನ ಮೊದಲ ಕೆಲಸ. ಕನ್ನಡ ಮಾತೃ ಸಂಸ್ಥೆ, ಈ ಸಂಸ್ಥೆಗೆ ತಾಲೂಕು ಮಟ್ಟದಲ್ಲಿ ಕನ್ನಡ ಭವನಗಳಿಲ್ಲ ಎನ್ನುವ ಕೊರಗನ್ನು ನೀಗಿಸುವೆ ಎಂದರು.
ಈಗಿನ ಕಾಲಮಾನಕ್ಕೆ ತಕ್ಕಂತೆ ಪರಿಷತ್ ಪ್ರಕಟಣೆಗಳ ಡಿಜಿಟಲೀಕರಣ ಹಾಗೂ ಪರಿಷತ್ ಪ್ರಕಟಣೆಗಳ ಆನ್ಲೈನ್ ಮಾರಾಟ ವ್ಯವಸ್ಥೆ ಮಾಡಲಾಗುವುದು. ಉದಯೋನ್ಮುಖ ಹಾಗೂ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ ಆಯೋಜಿಸಲಾಗವುದು ಎಂದು ಮಾಲಿಪಾಟೀಲ ಹೇಳಿದರು.