ಕೊಪ್ಪಳ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದ್ದು ಇಂದು ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಯಿತು.
ಸುಮಾರು 500ಕ್ಕೂ ಹೆಚ್ಚು ಟ್ರಾಕ್ಟರ್ಗಳು ಪಾಲ್ಗೊಂಡಿದ್ದ ಈ ಬೃಹತ್ ರ್ಯಾಲಿ ಕಾರಟಗಿ ತಾಲೂಕಿನ ಜಂಗಮರ ಕಲ್ಗುಡಿಯಿಂದ ಚಾಲನೆಗೊಂಡು ಸಿದ್ಧಾಪುರ, ನವಲಿ ಮೂಲಕ ಕನಕಗಿರಿಗೆ ಸಾಗಿತು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಾಕ್ಟರ್ಗಳ ದಾಖಲೆ ಪರಿಶೀಲನೆಗೆಂದು ಆಗಮಿಸಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ನೂರಾರು ಟ್ರಾಕ್ಟರ್ಗಳು ಏಕಕಾಲದಲ್ಲಿ ಬಂದಿದ್ದರಿಂದ ದಾಖಲೆಗಳ ಪರಿಶೀಲನೆ ಸಾಧ್ಯವಾಗದೆ ಕೈಚೆಲ್ಲಿ ಕುಳಿತರು.
ಇನ್ನು ಪ್ರತಿಭಟನೆಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಹರಿಹಾಯ್ದರು. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಈ ದೇಶವನ್ನು ಬಂಡವಾಳ ಶಾಹಿಗಳಿಗೆ ಕೇಂದ್ರ ಸರ್ಕಾರ ಮಾರಾಟ ಮಾಡಲು ಹೊರಟಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆಯಿಲ್ಲ; ಉಮೇಶ್ ಕತ್ತಿ