ಕೊಪ್ಪಳ: "ಕಾಂಗ್ರೆಸ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯೋಗ್ಯತೆ ಇಲ್ಲ. ಅವರು ಮೊದಲು ಪ್ರತಿಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳಲಿ. ಬಿಜೆಪಿಯವರಿಗೆ ಸರಿಯಾದ ರಸ್ತೆಯಲ್ಲಿ ಹೋಗಿ ಗೊತ್ತಿಲ್ಲ. ಅಡ್ಡದಾರಿ ಹಿಡಿದು ಹೋಗೋದು ಚೆನ್ನಾಗಿ ತಿಳಿದಿದೆ" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಬೀಳುತ್ತದೆ ಎಂಬ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯತ್ನಾಳ್ ಹಗಲು ಕನಸು ಕಾಣುತ್ತಿದ್ದಾರೆ. ಒಬ್ಬ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲು ಯೋಗ್ಯತೆ ಇಲ್ಲದ ಪಕ್ಷ ಅವರದ್ದು. ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ.ರವಿ ಹಾಗೂ ಬೊಮ್ಮಾಯಿಯವರಾಗಲಿ ಯಾರೇ ಆಗಲಿ ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಲಿ, ಬೇರೆಯವರ ತಟ್ಟೆಯಲ್ಲಿನ ನೊಣ ಯಾಕೆ ನೋಡುತ್ತೀರಿ" ಎಂದು ತಿರುಗೇಟು ಕೊಟ್ಟರು.
"ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿವೆ. ಆದರೆ ಪ್ರತಿಪಕ್ಷಗಳಿಗೆ ಸಮಾಧಾನವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಅವರಿಗೆ ಹೊಟ್ಟೆಕಿಚ್ಚು. ಭ್ರಷ್ಟಾಚಾರದ ಕುರಿತು ಯತ್ನಾಳರು ತನಿಖೆ ಮಾಡಲಿ ಎಂದಿದ್ದಾರೆ. ಅವರದೇ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿ. ನಾವು ತನಿಖೆಗೆ ಸಹಕರಿಸುತ್ತೇವೆ. ಬಿಜೆಪಿಯವರಿಗೆ ದೇಶ ಶಾಂತಿಯುತವಾಗಿರುವುದು ಬೇಡವಾಗಿದೆ" ಎಂದರು.
"ಜಿಲ್ಲೆಯ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಹಂತಹಂತವಾಗಿ ಪೂರ್ಣಗೊಳಿಸಲಾಗುವುದು. ನವಲಿ ಜಲಾಶಯ ಕುರಿತು ಸಭೆ ನಡೆಸಲಾಗುವುದು. ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಕೆಲವು ಲೋಪದೋಷಗಳಿವೆ. ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ನಡೆಸುತ್ತೇನೆ. ತೋಟಗಾರಿಕೆ ಪಾರ್ಕ್ ಕುರಿತು ಹಿಂದಿನ ಸರಕಾರ ಕೇವಲ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಈಗ ಭೂಸ್ವಾಧೀನ ಮಾಡುವ ಕುರಿತು ಸಭೆ ನಡೆಸಿ ಅನುಷ್ಠಾನಗೊಳಿಸಲಾಗುವುದು. ಇನ್ನು ಅಂಜನಾದ್ರಿ ಅಭಿವೃದ್ದಿಗೆ ಪ್ರವಾಸೋದ್ಯಮ ಸಚಿವರೊಂದಿಗೆ ಸಭೆ ನಡೆಸಲಾಗುವುದು. ಕೊಪ್ಪಳ ಜಿಲ್ಲೆಗೆ ಘೋಷಣೆಯಾಗಿರುವ ಜಾನಪದ ಲೋಕಕ್ಕೆ 3.5 ಕೋಟಿ ರೂಪಾಯಿ ನೀಡಲಾಗುವುದು. ಸ್ಥಳವನ್ನೂ ಗುರುತಿಸಲಾಗುವುದು. ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ ಗಮನ ಹರಿಸುತ್ತೇವೆ" ಎಂದು ಭರವಸೆ ನೀಡಿದರು.
ಕಿಷ್ಕಿಂದಾ ಪ್ರತ್ಯೇಕ ಜಿಲ್ಲೆ ಕೂಗು: ಕಂಪ್ಲಿ ಸೇರಿಕೊಂಡು ಗಂಗಾವತಿ ಜನರಿಂದ ಕಿಷ್ಕಂದಾ ಜಿಲ್ಲೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪ್ರತ್ರಿಕ್ರಿಯಿಸಿದ ಸಚಿವರು, "ಜನರ ಒತ್ತಾಯವಿದೆ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಿಲ್ಲೆ ಘೋಷಣೆ ಮಾಡುವುದು ಸುಲಭದ ಕೆಲಸವಲ್ಲ" ಎಂದು ತಿಳಿಸಿದರು.
ಕಾರಟಗಿ ತಾಲೂಕಿನ ಬೂದಗುಂಪಾ ಬಳಿ ಇಸ್ಪೀಟ್ ಮಾಫಿಯಾ ಬಗ್ಗೆ ಮಾತನಾಡಿ, "ಬೂದುಗುಂಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಕಾರಣದಿಂದ ಗಲಾಟೆಯಾಗಿದೆ. ತನಿಖೆಯಾದ ನಂತರ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯ ಯಾವ ಭಾಗದಲ್ಲಿಯೂ ಮಾಫಿಯಾ ನಡೆಯದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ" ಎಂದರು.
ಇದನ್ನೂ ಓದಿ: ಕಾಂಗ್ರೆಸ್‌ನ ಒಬ್ಬ ಶಾಸಕರಾದರೂ ಯತ್ನಾಳ್ ಸಂಪರ್ಕದಲ್ಲಿದ್ದಾರಾ?: ಸಚಿವ ಶಿವಾನಂದ ಪಾಟೀಲ್