ಗಂಗಾವತಿ (ಕೊಪ್ಪಳ): ಮಳೆ ನೀರಿನಿಂದಾಗಿ ಚರಂಡಿ ತುಂಬಿ ಹರಿದು ಇಲ್ಲಿನ ಇಲಾಹಿ ಕಾಲೋನಿ ಮುಳುಗಡೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆಯ ಕಮಿಷನರ್ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಕ್ತಾರ ಶಂಕರರಾವ್ ಉಂಡಾಳೆ ಮತ್ತು ಕಮಿನಷರ್ ವಿರೂಪಾಕ್ಷ ಮೂತರಿ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಅದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಈ ಸಂದರ್ಭದಲ್ಲಿ ಶಂಕರರಾವ್, ಕಮಿಷನರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಇಲಾಹಿ ಕಾಲೋನಿಯಲ್ಲಿನ ರಾಜಕಾಲುವೆ ಒತ್ತುವರಿಯಾಗಿದ್ದು, ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ, ಸ್ಥಳಕ್ಕೆ ಬನ್ನಿ. ಇದಕ್ಕೆ ಮುಖ್ಯ ಕಾರಣ ನಿಮ್ಮ ಕಚೇರಿಯ ಜೆಇ ಗುರುರಾಜ್ ಎಂದು ಶಂಕರರಾವ್ ಉಂಡಾಳೆ ದೂರವಾಣಿ ಮೂಲಕ ಕಮಿಷನರ್ ಗಮನಕ್ಕೆ ತಂದಿದ್ದಾರೆ.
ಈ ಸಂದರ್ಭದಲ್ಲಿ ನಗರದ ನಾನಾ ಭಾಗದಲ್ಲಿ ಮಳೆ ಮತ್ತು ಚರಂಡಿ ನೀರು ಸಂಗ್ರಹಗೊಂಡು, ಸಮಸ್ಯೆ ಉಂಟಾಗಿದ್ದರಿಂದ ಅದನ್ನು ನಿವಾರಿಸುವಲ್ಲಿ ಕಮಿಷನರ್ ತೊಡಗಿದ್ದರು. ಹಾಗಾಗಿ ತಡವಾಗಿ ಅಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ಹೋಗಿದೆ. ಬಳಿಕ ಕಮಿಷನರ್ ವಿರೂಪಾಕ್ಷ ಮೂತರಿ, ಶಂಕರಾವ್ ಉಂಡಾಳೆ ಮನೆಗೆ ಸಮಸ್ಯೆ ಆಲಿಸಲು ಹೋಗಿದ್ದಾರೆ. ಅಲ್ಲಿ ಕಾಂಗ್ರೆಸ್ ಮುಖಂಡ ಶಂಕರರಾವ್ ಹಲ್ಲೆ ಮಾಡಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ನಗರಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಧಾರಾಕಾರ ಮಳೆ: ಕೊಪ್ಪಳ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ ಡಿಸಿ