ಗಂಗಾವತಿ : ಬಡವರಿಗೆ ಎಂದು ಸರ್ಕಾರದಿಂದ ಪೂರೈಕೆ ಮಾಡಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಸಾಗಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಮಹಿಳೆಯರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಗಾಂಧಿನಗರದ ಗಂಗಮ್ಮ ಹುಸೇನಮ್ಮ, ಲಕ್ಷ್ಮಮ್ಮ ಮೌಲಪ್ಪ ಮತ್ತು ಕಿಲ್ಲಾ ಪ್ರದೇಶದ ಮಲಾನ ಬೀ ಹುಸೇನಪೀರಾ ಎಂಬ ಮಹಿಳೆಯರ ಮೇಲೆ ಆಹಾರ ಇಲಾಖೆಯ ನಗರದ ನಿರೀಕ್ಷಕಿ ನಂದಾ ಪಿ. ಪಲ್ಲೇದ, ಅಗತ್ಯ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಮೂವರು ಮಹಿಳೆಯರು ಗ್ರಾಮೀಣ ಭಾಗಕ್ಕೆ ತೆರಳಿ ನ್ಯಾಯಬೆಲೆ ಅಂಗಡಿ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಕಾಳಸಂತೆಯಲ್ಲಿ ಮಾರುವ ಉದ್ದೇಶಕ್ಕೆ ವಾಹನದಲ್ಲಿ ಸಾಗಿಸುತ್ತಿರುವಾಗ ಸಿಕ್ಕಿ ಬಿದಿದ್ದಾರೆ. ಈ ಮೂಲಕ ಸರ್ಕಾರದ ಯೋಜನೆ ದುರುಪಯೋಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾಲ್ಕು ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿಕೊಂಡು ತಲಾ 30 ರಿಂದ 40 ಕೆಜಿಯ 11 ಚೀಲಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಪ್ರಕರಣ ನಡೆದ ಮೂರು ದಿನಗಳ ಬಳಿಕ ದೂರು ದಾಖಲಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.